*ಗೋಕಾಕ-* ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬವಾಗಿರುವ ನಾಗರ ಪಂಚಮಿ ಹಬ್ಬದ ಹಿಂದಿನ ದಿನ ಸಹೋದರಿಯರು ನಾಗ ದೇವತೆಗೆ ಪ್ರಾರ್ಥಿಸಿಕೊಂಡು ತಮ್ಮ ಸಹೋದರರಿಗೆ ರಕ್ಷಣೆ ಸಿಗಲೆಂದು ಹರಕೆ ಹೊರುವ ಪ್ರತೀತಿ ಇಂದಿಗೂ ಪ್ರಸ್ತುತವಿದೆ ಎಂದು ಅರಭಾವಿ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಗುರುವಾರ ಸಂಜೆ ತಮ್ಮ ಗೃಹ ಕಚೇರಿಯಲ್ಲಿ ನಾಗರ ಪಂಚಮಿ ನಿಮಿತ್ತ ನಾಗ ದೇವತೆಗೆ ಪೂಜೆ ಸಲ್ಲಿಸಿದ ಅವರು, ತವರು ಮನೆಗಳಿಗೆ ಹೆಣ್ಣು ಮಕ್ಕಳನ್ನು ಬರಮಾಡಿಕೊಂಡು ಅವರಿಗೆ ಇಷ್ಟವಿರುವ
ಉಡುಗೊರೆಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.
ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪಡುವ ಈ ನಾಗರ ಪಂಚಮಿಯು ಎಲ್ಲ ಹಬ್ಬಗಳಿಗೆ ಮುನ್ನುಡಿಯಾಗಿದೆ. ಈ ಹಬ್ಬದ ನಂತರ ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಸೇರಿದಂತೆ ಅನೇಕ ಹಬ್ಬ- ಹರಿದಿನಗಳು, ಜಾತ್ರೆಗಳು, ಸಪ್ತಾಹಗಳು ಸೇರಿದಂತೆ ಅನೇಕ ಶುಭ- ಆಚರಣೆಗಳಿಗೆ ನಾಗರ ಪಂಚಮಿಯು ಮೆಟ್ಟಿಲು ಆಗಿದೆ ಎಂದು ಅವರು ತಿಳಿಸಿದರು.
ಮುಂಗಾರು ರಭಸದ ವೇಳೆಯಲ್ಲಿಯೇ ಈ ಹಬ್ಬವು ಬರಲಿದ್ದು, ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತದೆ. ರೈತನ ಫಸಲುಗಳನ್ನು ಕಾಪಾಡುವ ನಾಗ ದೇವತೆಗಳು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಬಾಲಚಂದ್ರ ಜಾರಕಿಹೊಳಿ ಅವರು ನಾಗ ದೇವತೆ( ನಾಗಪ್ಪ) ಗೆ ಹಾಲು ಎರೆದು ನಾಡಿನ ಸಕಲ ಜನತೆಗೆ, ಅದರಲ್ಲೂ ರೈತ ಬಾಂಧವರಿಗೆ ಒಳ್ಳೆಯದಾಗಬೇಕು. ಕಷ್ಟಗಳು ದೂರವಾಗಿ, ಪ್ರತಿಯೊಬ್ಬರಿಗೂ ನೆಮ್ಮದಿಯ ಜೀವನ ಸಾಗಿಸಲು ದೇವರಲ್ಲಿ ಅವರು ಪ್ರಾರ್ಥಿಸಿಕೊಂಡರು.
ಶಾಸಕರ ಗೃಹ ಕಚೇರಿಯ ಸಿಬ್ಬಂದಿಯವರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.