ಬೆಂಗಳೂರು : ಕರ್ನಾಟಕ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇವೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷಗಳು ತೀವ್ರ ಪೈಪೋಟಿ ನಡೆಸಲಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷವು ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲಿದೆ.
ಈ ನಾಲ್ಕು ಪಕ್ಷಗಳಲ್ಲದೇ ಹೊಸದೊಂದು ಪಕ್ಷವೀಗ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದಿದೆ.
ಮಾಜಿ ಸೈನಿಕರು ಸ್ಥಾಪಿಸಿದ ಹೊಸ ರಾಜಕೀಯ ಪಕ್ಷವಾದ ‘ಸಾರ್ವಜನಿಕ ಆದರ್ಶ ಸೇನಾ’ ಪಕ್ಷವು ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯಲು ಮುಂದಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬ್ರಿಗೇಡಿಯರ್ (ನಿವೃತ್ತ) ರವಿ ಮುನಿಸ್ವಾಮಿ, ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
‘ಅಧಿಕಾರದ ಹಸಿವು ಮತ್ತು ಭ್ರಷ್ಟ ಆಂತರಿಕ ಶತ್ರುಗಳಿಂದ ರಾಷ್ಟ್ರವನ್ನು ರಕ್ಷಿಸಲು ಪಕ್ಷವನ್ನು ಸ್ಥಾಪಿಸಲಾಗಿದೆ. ನಮ್ಮ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಡಲಿದೆ. ನಮಗೆ ಜನರ
ಬೆಂಬಲ ಬೇಕು’ ಎಂದು ಮುನಿಸ್ವಾಮಿ ಹೇಳಿದ್ದಾರೆ.
10 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪಕ್ಷವು ನಿರ್ಧರಿಸಿದೆ. 12ನೇ ತರಗತಿವರೆಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಎಚ್‌ಎಂಟಿ, ವಿಐಎಸ್‌ಎಲ್ ಮತ್ತು ಇತರ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪುನರುಜ್ಜೀವನ ಪಕ್ಷದ ಕಾರ್ಯಸೂಚಿಯಲ್ಲಿದೆ.
ಮೇ 2023 ಕ್ಕಿಂತ ಮುಂಚಿತವಾಗಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯು 24 ಮೇ 2023 ರಂದು ಕೊನೆಗೊಳ್ಳಲಿದೆ. ಹಿಂದಿನ ವಿಧಾನಸಭಾ ಚುನಾವಣೆಗಳು ಮೇ 2018 ರಲ್ಲಿ ನಡೆದಿದ್ದವು. ಚುನಾವಣೆಯ ನಂತರ, ಜನತಾ ದಳ (ಜಾತ್ಯತೀತ) ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವು ಅಸ್ತಿತ್ವಕ್ಕೆ ಬಂದಿತು. ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು.
2019 ರಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರು ಸರ್ಕಾರ ರಚಿಸುವಲ್ಲಿ ಯಶಸ್ವಿಯಾದರು. 26 ಜುಲೈ 2021 ರಂದು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಸವರಾಜ ಬೊಮ್ಮಾಯಿ ಅವರು 28 ಜುಲೈ 2021 ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂತಿಮ ಮತದಾರರ ಪಟ್ಟಿಗಳ ಪ್ರಕಾರ, ಕರ್ನಾಟಕವು 5.05 ಕೋಟಿ ನೋಂದಾಯಿತ ಮತದಾರರನ್ನು ಹೊಂದಿದೆ. ಈ ಸಂಖ್ಯೆಯಲ್ಲಿ 2.50 ಕೋಟಿ ನೋಂದಾಯಿತ ಮಹಿಳಾ ಮತದಾರರು ಮತ್ತು 4,502 ಇತರ ಮತದಾರರು ಸೇರಿದ್ದಾರೆ
ಭಾರತೀಯ ಜನತಾ ಪಕ್ಷವು ಪ್ರಸ್ತುತ ವಿಜಯ ಸಂಕಲ್ಪ ಯಾತ್ರೆಯಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷವು ಜನಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದೆ. ಜೆಡಿಎಸ್ ಪಕ್ಷವು ಪಂಜರತ್ನ ಯಾತ್ರೆಯ ಮೂಲಕ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದೆ. ಕಳೆದ ವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ದಾವಣಗೆರೆಗೆ ಬಂದು ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ.
ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿಯೆಂದು ಪರಿಗಣಿಸಲಾಗಿದೆ. ಆದರೆ, ಮುಂದೆ ಯಾವ ಬದಲಾವಣೆಗಳಾಗಲಿವೆ ಎಂದು ಕಾದು ನೋಡಬೇಕಿದೆ. ಇನ್ನು ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದಾರೆ.