ಪ್ರೀಯ ಓದುಗರೆ, ನಾನು ಈ ಮೇಲಿನ ನುಡಿಯನ್ನು “ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಲಿ ಕಾಣೋ, ಹೆತ್ತ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೊ ” ಈ ಸಾಲು ನುಡಿಗಳಿಂದ ಪ್ರಾರಂಭಿಸುತ್ತೇನೆ. ಒಂದು ಮಗುವಿನ ಲಾಲನೆ- ಪಾಲನೆ- ಪೋಷಣೆಯಿಂದ ಹಿಡಿದು ಅವನ ಇಡೀ ವ್ಯಕ್ತಿತ್ವ ಸರ್ವರೂ ಒಪ್ಪಿಕೊಳ್ಳುವ ಹಾಗೆ ಅಡಿಪಾಯ ಹಾಕುವ ‘ ಛಾತಿ’ ಇರೋದು ತಾಯಿಯ ಮುತ್ತಿನಂತ ನುಡಿಗಳಿಗೆ ಮಾತ್ರ….!
ಹೌದು, ಕನ್ನಡ ಸಾಹಿತ್ಯದಲ್ಲಿ ಬಹಳ ಗಂಭೀರ ಮತ್ತು ಹೃದಯಸ್ಪರ್ಶಿ ವಿಷಯವಾಗಿದೆ ಈ ‘ಹೆತ್ತ ತಾಯಿಯ ಮುತ್ತು ನುಡಿ ‘. ಹೆತ್ತ ತಾಯಿಯ ನುಡಿ ಎಂದರೆ, ತಾಯಿಯ ಮಾತು,ಆಕೆಯ ಪ್ರೀತಿ, ಆಕೆಯ ಶಾಶ್ವತ ಮಮತೆಯ ಪ್ರತೀಕ.ತಾಯಿ ತನ್ನ ಮಕ್ಕಳನ್ನು ಪ್ರೀತಿಯಿಂದ ಲಾಲಿ ಸುತ್ತಾಳೆ.ತಾಯಿಯು ಎಲ್ಲಾ ಬಗೆಯ ಶ್ರದ್ಧೆಯನ್ನು ತನ್ನ ಮಕ್ಕಳ ಮೇಲೆ ಬೀರುತ್ತಾಳೆ. ಅವಳ ಪ್ರೀತಿಯು ನಿಸ್ವಾರ್ಥ ಅವಳ ಮಾತುಗಳು ಅಚ್ಚುಮೆಚ್ಚಿದ ಮತ್ತು ನಿಷ್ಕ ಪಟ.
ತಾಯಿಯು ಎಷ್ಟು ಕಷ್ಟಗಳನ್ನು ಎದುರಿಸಿದರೂ ಅವಳು ಮಕ್ಕಳಿಗೆ ಎಂದಿಗೂ ಸವಲತ್ತು ನೀಡಲು ಹಿಂಜರಿಯುವುದಿಲ್ಲ.ತಾಯಿಯ ಪ್ರೀತಿ ಶಾಶ್ವತವಾದದ್ದಾಗಿದೆ. ತಾಯಿ ತನ್ನ ಮಕ್ಕಳಿಗೆ ಧೈರ್ಯ, ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವನ್ನು ತುಂಬುವ ಮಾತುಗಳನ್ನು ಹೇಳುತ್ತಾಳೆ. ‘ಅವಳ ಮಮತೆ ಅಕ್ಕರೆಯಂತೆ,ಅವಳ ಮಾತು ಸಿಹಿ ಸಕ್ಕರೆಯಂತೆ’…!
‘ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ’ ಎನ್ನುವಂತೆ,ತಾಯಿಯಿಂದ ಮಕ್ಕಳಿಗೆ ಜೀವನದ ಪಾಠ, ಸಂಸ್ಕಾರ,ಆದರ್ಶಗಳು ದೊರಕುತ್ತವೆ. ತಾಯಿಯ ಮುತ್ತು ನುಡಿ ನಮಗೆ ಯಾವಾಗಲೂ ಮುನ್ನಡೆಯಲು ಪ್ರೇರೇಪಿಸುತ್ತದೆ.ತಾಯಿ ಎಂಬುವುದು ಶಬ್ದವಷ್ಟೇ ಅಲ್ಲ, ಅದು ಭಾವನೆಗಳ,ನೆನಪುಗಳ, ತ್ಯಾಗದ ಹಾಗೂ ನಿಸ್ವಾರ್ಥ ಪ್ರೀತಿಯ ಮಧುರ- ಮಧುರ ಮನೋವೃತ್ತಿಯ ಸಂಕೇತವಾಗಿದೆ.ತಾಯಿ ನಮ್ಮ ಜೀವನದ ಮೊದಲ ಗುರು, ಮೊದಲ ಮಿತ್ರ ಮತ್ತು ಸದಾ ನಮ್ಮೊಂದಿಗಿರುವ ಶಕ್ತಿ.ತನ್ನ ಎಲ್ಲಾ ಕನಸುಗಳನ್ನು ಬಿಟ್ಟು,ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ಅವಳು ಅನೇಕ ತ್ಯಾಗವನ್ನೇ ಮಾಡುತ್ತಾಳೆ.ರಜೆ, ಸಂಬಳವೇ ಇಲ್ಲದೆ ಕೆಲಸ ಮಾಡುವ ಶ್ರಮಜೀವಿ.ಕುಟುಂಬದ ಏಳಿಗೆಗೆ ಕ್ಷಣ-ಕ್ಷಣಕ್ಕೂ ಕಷ್ಟಪಡುವ ತ್ಯಾಗಮಯಿ.’ ಓ ತಾಯಿ ಎಂಬ ತ್ಯಾಗಮಯಿಯೆ ನಿನಗೊಂದು ನನ್ನ ನಮಸ್ಕಾರ.
ಒಂದು ದಿನ ಅರ್ಜುನ ಶ್ರೀ ಕೃಷ್ಣನಿಗೆ ಕೇಳುತ್ತಾನೆ ‘ಓ ಮಾಧವ ನಿಜವಾದ ಪ್ರೀತಿಯ ಆತ್ಮ ಯಾವುದು? ಎಂದು, ಆಗ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾರೆ, ” ಷರತ್ತುಗಳಿಲ್ಲದೆ ಪ್ರೀತಿಸುವುದು, ಉದ್ದೇಶವಿಲ್ಲದೆ ಮಾತನಾಡುವುದು, ನಿರೀಕ್ಷೆಯಿಲ್ಲದೆ ಕಾಳಜಿ ಮಾಡುವುದು, ಕಾರಣವಿಲ್ಲದೆ ಎಲ್ಲವನ್ನು ಅರ್ಪಿಸುವುದು,ನಿಜವಾದ ಪ್ರೀತಿಯ ಆತ್ಮ ಅದು ತಾಯಿಯ ಆತ್ಮ ಎಂದು ಹೇಳಿದರು.ಇಷ್ಟೊಂದು ನಿಷ್ಕಲ್ಮಶ ಪ್ರೀತಿ ತಾಯಿಯದ್ದು..!
ತಾಯಿಯ ಮಾತು ಅವಳ ಸಂಸ್ಕಾರ ಬಹಳಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವುದು ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾಗ…! ತವರು ಮನೆಯಿಂದ ಗಂಡನ ಮನೆಗೆ ಹೋಗಬೇಕಾದ ತನ್ನ ಮಗಳಿಗೆ ತಾಯಿಯಾದವಳು ‘ಅವಳಿಗೆ ಗಂಡನ ಮನೆಗೆ ಬೆಳಕಾಗಿ, ತವರು ಮನೆಗೆ ಹೆಸರಾಗು’ ಎಂದು ಕಿವಿ ಮಾತನ್ನು ಹೇಳಬೇಕು. ಇದು ಯಾವ ತಾಯಿಯಲ್ಲಿ ಸಾಧ್ಯ ಎಂದರೆ ಮಗಳ ಮೇಲೆ ಪ್ರೀತಿಯನ್ನು ಹೊಂದಿದ ತಾಯಿಯಿಂದ ಮಾತ್ರ ಸಾಧ್ಯ. ಆದರೆ ಮಗಳ ಮೇಲೆ ವ್ಯಾಮೋಹವಿರುವ ತಾಯಿಯಿಂದ ಸಾಧ್ಯವೇ ಇಲ್ಲ.
ಹಾಗಾಗಿ ತಾಯಿಯ ಆಶೀರ್ವಾದವಿಲ್ಲದೆ ಬದುಕುವುದು ನಮ್ಮ ಕಲ್ಪನಿಗೂ ಮೀರಿದ್ದು.’ತಾಯಿಯ ಪ್ರೀತಿಯನ್ನು ಹೋಲಿಸುವುದು ಸೂರ್ಯನ ಮುಂದೆ ದೀಪವನ್ನು ಬೆಳಗಿಸಿದಂತೆ’.ಏಕೆಂದರೆ ಕಷ್ಟ ಬಂದಾಗ ಸಂತೈಸಿದವರು ಅಮ್ಮ. ಮಕ್ಕಳ ಹಾದಿಗೆ ಸದಾ ಕಾವಲಾಗಿರುವವರು ಅಮ್ಮ. ಎಡವಿ ಬಿದ್ದಾಗ ಕೈ ಕೊಟ್ಟು ಮೇಲೆ ಎತ್ತುವವರು ಅಮ್ಮ.ಕಣ್ಣೀರಿಟ್ಟಾಗ ಪ್ರೀತಿಯ ಮಳೆಗರೆದು ಕಣ್ಣೀರು ಒರೆಸುವವರು ಅಮ್ಮ. ಸಾಧನೆ ಮಾಡಿದಾಗ ಹಿರಿ-ಹಿರಿ ಹಿಗ್ಗಿ ಖುಷಿ ಪಡುವವರು ಅಮ್ಮ.ತಾನು ಅರೆಹೊಟ್ಟೆಯಲ್ಲಿದ್ದರೂ ಮಕ್ಕಳು ಹಸಿದಿರಬಾರದು ಎಂದು ಕಷ್ಟಪಡುವವರು ಅಮ್ಮ. ಕೊನೆಯುಸಿರು ಇರುವ ತನಕ ಮಕ್ಕಳ ಏಳಿಗೆಯನ್ನೇ ಬಯಸುವವರು ಅಮ್ಮ.ಹೀಗೆ ಅಮ್ಮ ಎಂದರೆನೇ ಎಲ್ಲಾ.ಎಲ್ಲರ ಬದುಕಿನ ಅಣು-ಅಣು ಕೂಡಾ ಅಮ್ಮ ಕೊಟ್ಟ ಭಿಕ್ಷೆ ಎಂದರೆ ತಪ್ಪಾಗಲಾರದು…!
ಅಮ್ಮನ ಮಡಿಲಿಗಿಂತ ನೆಮ್ಮದಿ ಕೊಡೊ ಬೇರೆ ಯಾವ ಜಾಗವಿಲ್ಲ. ತನ್ನ ಹಸಿವ ನುಂಗಿ ಹೊಟ್ಟೆ ತುಂಬಿಸುವಳು ಅಮ್ಮ. ಕಷ್ಟವೇ ಬಂದ್ರು, ಸುಖನೆ ಇದ್ರೂ ನಮ್ಮೊಂದಿಗಿರುವವಳು ನೆರಳಿನಂತೆ. ನಾವು ಓಡಿದರು, ನಾವು ನಡೆದರು ನಮ್ಮ ಹಿಂದೆಯೇ ಬರುವಳು ಹೆಜ್ಜೆ ಗುರುತಿನಂತೆ ಎಂಬುವುದು ಮಾತ್ರ ಗಮನಾರ್ಹ…!
ಈ ಭೂಮಿ ಮೇಲೆ ಎಷ್ಟೋ ಮಕ್ಕಳಿಗೆ ತಾಯಿ ಎಂಬ ತ್ಯಾಗಮಯಿನೂ ಇಲ್ಲ. ಅವಳ ಮುತ್ತಿನಂತ ನುಡಿಗಳು ಇಲ್ಲ. ಹಾಗಾಗಿ ಅದಕ್ಕೆ ಹೇಳೋದು ಐಷಾರಾಮಿ ಹೋಟೆಲ್ನಲ್ಲಿ ಕೂತು ಬಿಂದಾಸ್ ಆಗಿ ಊಟ ಮಾಡೋಕೆ ಕೈಯಲ್ಲಿ ಹಣ ಇರಬೇಕು. ಏನಿಲ್ಲದಿದ್ದರೂ,ನೆಮ್ಮದಿಯಾಗಿ ಕೂತು ಪ್ರೀತಿ,ಮಮತೆ ಬೆರೆಸಿ ಮಾಡಿದ ಅಮ್ಮನ ಕೈ ಅಡಿಗೆ, ಕೈ ತುತ್ತನ್ನು ತಿನ್ನಕ್ಕೆ ಋಣ ಇರಬೇಕು. ಹೀಗಾಗಿ ಯಾವ ತಾಯಿಯ ಮಾತನ್ನು ಅಲ್ಲಗಳೆಯದೆ, ಭಾವನೆಗಳಿಗೆ ಧಕ್ಕೆ ಬರದಂತೆ,ಮನಸ್ಸಿಗೆ ನೋವಾಗದಂತೆ ಪ್ರತಿ ಮನೆಯ ಮೊದಲ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕಾದದ್ದು ಅವಶ್ಯಕವಾಗಿದೆ.
ಸ್ನೇಹಿತರೆ ,ಕೊನೆಯದಾಗಿ ನಾನು ಹೇಳುವುದಾದರೆ “ಅವ್ವ ನೀ ಇದ್ರೆ ಈ ಭೂಮಿಗೆ ನಾ ದೊರೆ, ನೀನಿಲ್ಲವಾದ್ರೆ ಈ ಭೂಮಿಗೆ ನಾ ಹೊರೆ ” ಲವ್ ಯು ಮಾ…!!
“ತಾಯಿ ಎಂದರೆ ಪ್ರೀತಿ. ಅವಳಿದ್ದರೆ ಇರುವುದಿಲ್ಲ ಯಾವ ಭೀತಿ.ಬದುಕಲು ಕಲಿಸುವ ಅವಳ ರೀತಿ.ಯಾರಿಲ್ಲ ಅವಳಿಗೆ ಸರಿಸಾಟಿ”.
ಶ್ರೀ. ರಮೇಶ. ಎಸ್. ಬಿರಾದಾರ ಶಿಕ್ಷಕರು : ಎಸ್. ಎಸ್. ಆರ್. ಪ್ರಾಢ ಶಾಲೆ, ಮೂಡಲಗಿ. 9964231143