Breaking News

ಪದೇ ಪದೇ ಜನರಲ್ಲಿ ಆತಂಕ ಮೂಡಿಸುತ್ತಿದೆ ಪ್ಲಾಸ್ಟಿಕ್​ ಅಕ್ಕಿ

Spread the love

ಕೋಲಾರ ಜಿಲ್ಲೆಯ ಬಂಗಾರಪೇಟೆ, ಮಾಲೂರು, ಮುಳಬಾಗಿಲು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪಡಿತರ ಅಕ್ಕಿಯಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ವಿತರಣೆ ಮಾಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿಯನ್ನು ಮಿಶ್ರಣ ಮಾಡಿ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕೋಲಾರ: ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿ ಪಡಿತರ(Ration) ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿತರಣೆ ಮಾಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿಯನ್ನು(Plastic Rice) ಮಿಶ್ರಣ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ವಿಚಾರವಾಗಿ ಜಿಲ್ಲೆಯಲ್ಲಿ ಜನರು ಈಗಾಗಲೇ ಸಾಕಷ್ಟು ಆತಂಕಗೊಂಡಿದ್ದಾರೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮೇಲಿಂದ ಮೇಲೆ ಇಂಥಾದೊಂದು ಘಟನೆಗಳು ಮರುಕಳಿಸುತ್ತಿದ್ದರೂ ಕೂಡಾ ಅಧಿಕಾರಿಗಳು(Officers) ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪದೇ ಪದೇ ಜನರಲ್ಲಿ ಆತಂಕ ಮೂಡಿಸುತ್ತಿದೆ ಪ್ಲಾಸ್ಟಿಕ್​ ಅಕ್ಕಿ

ಈಗಾಗಲೇ ಕೋಲಾರ ಜಿಲ್ಲೆಯ ಬಂಗಾರಪೇಟೆ, ಮಾಲೂರು, ಮುಳಬಾಗಿಲು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪಡಿತರ ಅಕ್ಕಿಯಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ವಿತರಣೆ ಮಾಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿಯನ್ನು ಮಿಶ್ರಣ ಮಾಡಿ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಹೆಚ್ಚಾಗಿ ಶ್ರೀನಿವಾಸಪುರ ತಾಲೂಕು ಹಾಗೂ ಮುಳಬಾಗಿಲು ತಾಲೂಕಿನಲ್ಲಿ ಪ್ಲಾಸ್ಟಿಕ್​ ಅಕ್ಕಿಯನ್ನು ಮಿಶ್ರಣ ಮಾಡಿ ಅಕ್ರಮ ಎಸಗಲಾಗುತ್ತಿದೆ ಅನ್ನೋದು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿರುವ ವಿಚಾರ. ಈಗಾಗಲೇ ಮುಳಬಾಗಿಲು ತಾಲ್ಲೂಕಿನ ತಾಯಲೂರು, ಅಮ್ಮನಲ್ಲೂರು, ನಂಗಲಿ ಸೇರಿದಂತೆ ವಿವಿಧೆಡೆಗಳಲ್ಲಿ ಪ್ಲಾಸ್ಟಿಕ್​​ ಅಕ್ಕಿ ಪತ್ತೆಯಾಗಿದೆ. ಮುಳಬಾಗಿಲು ತಾಲ್ಲೂಕಿನ ಮಲ್ಲೆಕುಪ್ಪ ಗ್ರಾಮದಲ್ಲಿ ಅನಿಲ್​ ಎಂಬುವವರ ಮಕ್ಕಳಿಗೆ ನೀಡಲಾಗಿದ್ದ ಅಕ್ಕಿಯಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್​ ಅಕ್ಕಿ ಮಿಶ್ರಣ ಮಾಡಲಾಗಿದೆ ಎಂದು ಅನಿಲ್​ ಕುಮಾರ್​ ಸ್ಥಳೀಯ ಅಂಗನವಾಡಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಏನಿದು ಪ್ಲಾಸ್ಟಿಕ್​ ಅಕ್ಕಿ?

ಅಂಗನವಾಡಿ ಅಥವಾ ಪಡಿತರ ಕೇಂದ್ರಗಳಿಂದ ತಂದಿರುವ ಅಕ್ಕಿಗಳಲ್ಲಿ ಈ ಪ್ಲಾಸ್ಟಿಕ್​ ಅಕ್ಕಿ ಕಂಡು ಬರುತ್ತಿದೆ. ಅದರಲ್ಲೂ ಇದು ನೀರಿನಲ್ಲಿ ಅಕ್ಕಿಯನ್ನು ತೊಳೆಯುವ ವೇಳೆಯಲ್ಲಿ ಅಕ್ಕಿ ನೀರಿನಲ್ಲಿ ತೇಲುತ್ತದೆ. ಅದರ ಜೊತೆಗೆ ಅನ್ನ ಮಾಡಲು ಹೋದಂತ ಸಂದರ್ಭದಲ್ಲಿ ಅದು ಪ್ಲಾಸ್ಟಿಕ್​ ರೀತಿಯಲ್ಲಿ ಅಕ್ಕಿ ಕರಗಿ ಅಂಟು ಅಂಟಾಗಿ ಕಂಡು ಬರುತ್ತದೆ. ಇದರಿಂದ ಆತಂಕ ಗೊಂಡಿರುವ ಜನರು, ಇದು ಪ್ಲಾಸ್ಟಿಕ್​ ಅಕ್ಕಿ ಎಂದು ದೂರು ನೀಡುತ್ತಿದ್ದಾರೆ.

ಜನರು ಮೇಲಿಂದ ಮೇಲೆ ಪ್ಲಾಸ್ಟಿಕ್​​ ಅಕ್ಕಿ ಎಂದು ಆತಂಕಗೊಂಡಿರುವ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಓ ರಮೇಶ್​ ಅವರು ಮಾಹಿತಿ ನೀಡಿದ್ದು, ಇದು ಪ್ಲಾಸ್ಟಿಕ್​ ಅಕ್ಕಿ ಎಂದು ಜನರು ತಪ್ಪು ತಿಳಿದುಕೊಂಡಿದ್ದಾರೆ. ಅದು ಪ್ಲಾಸ್ಟಿಕ್​ ಅಕ್ಕಿ ಅಲ್ಲ. ಅದು ಕೇಂದ್ರ ಸರ್ಕಾರದ ಆಹಾರದ ಗೋಡೋನ್​ಗಳಲ್ಲೇ ಸಾರಭರಿತ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತಿದೆ. ಅನ್ನದಲ್ಲಿ ಪೌಷ್ಟಿಕಾಂಶವಿರಬೇಕು ಹಾಗೂ ಅಪೌಷ್ಠಿಕತೆ ನಿವಾರಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತಿದೆ. ಇದು ನೀರಿನಲ್ಲಿ ತೇಲುತ್ತದೆ ಜೊತೆಗೆ ಇದು ಅನ್ನ ಮಾಡುವ ವೇಳೆಯಲ್ಲಿ ಅಂಟು ಅಂಟಾಗಿರುತ್ತದೆ. ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಾಗಿ ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


Spread the love

About Ad9 News

Leave a Reply

Your email address will not be published. Required fields are marked *