ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣ ಕ್ರಮಗಳಿಗೆ ಕಂದಾಯ ಇಲಾಖೆ ಮೊದಲ ಹಂತದಲ್ಲಿ 84 ಕೋಟಿ ರೂ. ಬಿಡುಗಡೆ ಮಾಡಿದೆ. ಕೊರೊನಾ ನಿಯಂತ್ರಣಕ್ಕೆ ಈವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಹಣ ಮಾತ್ರ ಖರ್ಚು ಮಾಡಲಾಗುತ್ತಿತ್ತು.
ಆರೋಗ್ಯ ತುರ್ತು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿರುವ ಅನುದಾನದ ಪೈಕಿ ಶೇ.25ರಷ್ಟು ಕೊರೊನಾ ನಿಯಂತ್ರಣ ಕಾರ್ಯಗಳಿಗೆ ಖರ್ಚು ಮಾಡಲು ಸೂಚನೆ ನೀಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಕೇಂದ್ರ ಸರ್ಕಾರ ಜನಸಂಖ್ಯೆ ಆಧರಿಸಿ ರಾಜ್ಯ ಸರ್ಕಾರಕ್ಕೆ ಎಸ್‍ಜಿಆರ್‍ಎಫ್ ಅಡಿ ಈ ವರ್ಷ 334 ಕೋಟಿ ರೂ.ಬಿಡುಗಡೆ ಮಾಡಿದೆ. ಅದರಲ್ಲಿ ಶೇ.25ರಷ್ಟನ್ನು ಅಂದರೆ 84 ಕೋಟಿ ರೂ.ಗಳನ್ನು ಕೊರೊನಾ ನಿಯಂತ್ರಣಕ್ಕೆ ಹಾಗೂ ಈ ಮೊತ್ತದಲ್ಲಿ ಶೇ.10ರಷ್ಟನ್ನು ವೈದ್ಯಕೀಯ ಸಲಕರಣೆ ಖರೀದಿಗೆ ಸೂಚಿಸಲಾಗಿದೆ.
ವೈದ್ಯಕೀಯ, ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಹಣ ವ್ಯಯಿಸಲಾಗುತ್ತಿದ್ದು, ತುರ್ತಾಗಿ ಎಲ್ಲ ಜಿಲ್ಲಾಧಿಕಾರಿಗಳಿಗೆ ತಾವು ಪತ್ರ ಬರೆದು ಅಗತ್ಯತೆಗೆ ಅನುಸಾರ ಅನುದಾನ ಬಳಕೆಗೆ ತಿಳಿಸುವುದಾಗಿ ಹೇಳಿದರು. ಸ್ಥಳೀಯ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದು, ಈ ಕುರಿತಂತೆ ಕೂಡಲೇ ಮುಖ್ಯಮಂತ್ರಿ, ಆರೋಗ್ಯ ಸಚಿವರ ಜತೆ ಸಭೆ ನಡೆಸಿ ಅನುದಾನವನ್ನು ಯಾವ ರೀತಿ ಖರ್ಚು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹಣಕಾಸಿನ ತೊಂದರೆ ಇಲ್ಲ. ಕೇಂದ್ರ ನೀಡಿರುವ ಅನುದಾನದಲ್ಲಿ ಶೇ.25ರಷ್ಟು ಹಣದ ಬಳಕೆಗೆ ಅವಕಾಶ ನೀಡಿದೆ. ಇನ್ನು ಮುಂದಿನ 30 ದಿನಗಳ ನಂತರ ಮತ್ತೊಂದು ಆದೇಶ ಬರುವ ನಿರೀಕ್ಷೆ ಇದೆ. ಆಗ ಇನ್ನಷ್ಟು ಅನುದಾನ ಬಳಕೆಗೆ ಸಲಹೆ ನೀಡುವ ಸಾಧ್ಯತೆ ಇದೆ ಎಂದರು.
Ad9 News Latest News In Kannada
