ಬೆಂಗಳೂರು :ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್ ಗಳ ಪತಿ-ಪತಿ ಪ್ರಕರಣಗಳಲ್ಲಿ ಅಂತರ ಜಿಲ್ಲಾ ವರ್ಗಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಅಂತರ ಜಿಲ್ಲಾ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಪೊಲೀಸ್ ಪೇದೆಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಪೊಲೀಸ್ ಪೇದೆಗಳ ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ ಜಿಲ್ಲಾ ವರ್ಗಾವಣೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಅರ್ಹ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಅಂತರ ಜಿಲ್ಲಾ ವರ್ಗಾವಣೆಗೆ ಪ್ರಸ್ತಾವನೆಗಳ ಬಗ್ಗೆ ಕ್ರಮ ಕೈಗೊಂಡು, ಆ ಬಗ್ಗೆ ತಮಗೆ ವರದಿ ನೀಡುವಂತೆಯೂ ಗೃಹ ಸಚಿವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರದಲ್ಲಿ ನಿರ್ದೇಶಿಸಿಸಿದ್ದಾರೆ.
ಅಂದಹಾಗೇ ಕಳೆದ ಮೂರು ವರ್ಷಗಳಿಂದ ಪೊಲೀಸ್ ಪೇದೆಗಳ ವರ್ಗಾವಣೆ ನಡೆದಿಲ್ಲ. ಈ ಸಂಬಂಧ ಗೃಹ ಸಚಿವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ದಯಾಮರಣ ನೀಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ಪೇದೆಯೊಬ್ಬರು ಬರೆದಂತ ಪತ್ರ ವೈರಲ್ ಆಗಿತ್ತು. ಈ ಬೆನ್ನಲ್ಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್ ಈ ಸೂಚನೆ ನೀಡಿದ್ದಾರೆ.