ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. ಅದಕ್ಕೆ ನಾನು ಬದ್ಧಳಾಗಿದ್ದೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೋಮನಟ್ಟಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಹೆಚ್ಚುವರಿ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನನಾಡಿದರು.
‘ಕಳೆದ ಅವಧಿಯಲ್ಲಿ ಸಾಕಷ್ಟು ಶಾಲಾ ಕೊಠಡಿ, ಸ್ಮಾರ್ಟ್‌ಕ್ಲಾಸ್, ಆಟದ ಮೈದಾನ, ವಿಜ್ಞಾನ ಉಪಕರಣ, ಕ್ರೀಡಾ ಸಾಮಗ್ರಿ ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಜೊತೆಗೆ ದೇವಸ್ಥಾನಗಳನ್ನು, ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿ, ಶೈಕ್ಷಣಿಕ ಕ್ರಾಂತಿ ಮಾಡುತ್ತೇನೆ’ ಎಂದು ಹೇಳಿದರು.
‘ತುಮ್ಮರಗುದ್ದಿ ಹಾಗೂ ಸೋಮನಟ್ಟಿಗೆ ತಲಾ ಇನ್ನೊಂದು ಕೊಠಡಿ, ಶಾಲೆಗೆ ಅಗತ್ಯವಾದ ಎಲ್ಲ ಡೆಸ್ಕ್‌ಗಳನ್ನು ಒದಗಿಸುತ್ತೇನೆ. ತುಮ್ಮರಿಗುದ್ದಿಗೆ ವಿಜ್ಞಾನ ಉಪಕರಣ, ಸ್ಮಾರ್ಟ್‌ಕ್ಲಾಸ್ ಕೊಠಡಿ ಒದಗಿಸುತ್ತೇನೆ. ಸೋಮನಟ್ಟಿಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಯಲ್ಲಮ್ಮನ ಗುಡಿಯನ್ನು ನಿರ್ಮಾಣ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಗ್ರಾಮಗಳ ಹಿರಿಯರು, ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಇದ್ದರು.
ಮಂದಿರ ಉದ್ಘಾಟನೆ: ತುಮ್ಮರಗುದ್ದಿ ಗ್ರಾಮದಲ್ಲಿ ನಿರ್ಮಿಸಿದ ಹನುಮಾನ್ ಮಂದಿರವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಉದ್ಘಾಟಿಸಿದರು