ಕಾರ್ಖಾನೆಗೆ ರೈತರೇ ಜೀವಾಳ : ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ.
ಎರಡು ವರ್ಷದೊಳಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಪಣ
ಗೋಕಾಕ : ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು.
ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರು ಹಾಗೂ ಮಕ್ತೆದಾರರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗೆ ಬೆನ್ನೆಲಬಾಗಿ ನಿಂತಿರುವ ರೈತರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ರೈತರೇ ನಮ್ಮ ಕಾರ್ಖಾನೆಗೆ ಆಧಾರ ಸ್ತಂಬವಾಗಿದ್ದಾರೆ ಎಂದು ಹೇಳಿದರು.
ಈ ಕಾರ್ಖಾನೆ ಯಾರಪ್ಪನ ಆಸ್ತಿಯು ಅಲ್ಲ. ಇದು ರೈತರ ಸ್ವತ್ತು. ಬೇರೋಬ್ಬರಿಗೆ ಮಾರುವ ಪ್ರಶ್ನೆಯೇ ಇಲ್ಲ. ಕಾರ್ಖಾನೆಯು ನಷ್ಟದಲ್ಲಿದ್ದ ಸಂದರ್ಭದಲ್ಲಿ ಬೋರಗಾಂವ ಅರಿಹಂತ ಸೋಸಾಯಿಟಿಯವರಿಂದ ಸಾಲದ ರೂಪದಲ್ಲಿ ಹಣವನ್ನು ಪಡೆದಿದ್ದೇವೆ. ರೈತರ ಕಬ್ಬಿನ ಬಿಲ್ಲನ್ನು ಸಂದಾಯ ಮಾಡಲಿಕ್ಕೆ ಅರಿಹಂತ ಸೊಸಾಯಿಟಿಯವರಿಂದ ಸಹಾಯ ಪಡೆದುಕೊಂಡಿದ್ದೇವೆ. ಇದನ್ನೇ ಬಂಡವಾಳವನ್ನಿಟ್ಟುಕೊಂಡು ಕೆಲ ಹಿತಾಸಕ್ತಿಗಳು ಕಾರ್ಖಾನೆಯನ್ನು ಮಾರಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಸಹಕಾರಿ ತತ್ವದಡಿ ಸ್ಥಾಪಿತಗೊಂಡಿರುವ ಈ ಭಾಗದ ಹೆಮ್ಮೆಯ ಕಾರ್ಖಾನೆಯು ರೈತರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಅವರು ಸ್ಪಷ್ಟನೆ ನೀಡಿದರು.
ಕಾರ್ಖಾನೆಗೆ ಎಷ್ಟೇ ಹಾನಿಯಾದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ರೈತರ ಹಿತ ಕಾಪಾಡುತ್ತೇವೆ. 1992 ರಿಂದ ರೈತರ ಸಹಕಾರದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ನಾವುಗಳು ಎಷ್ಟೇ ಸಮಸ್ಯೆಗಳು ಎದುರಾದರೂ ಅವುಗಳನ್ನು ಮೆಟ್ಟಿ ನಿಂತು ರೈತರು, ಕಾರ್ಮಿಕರ ಏಳ್ಗೆಗಾಗಿ ಎಲ್ಲ ಸಕ್ಕರೆ ಕಾರ್ಖಾನೆಗಳಿಗಿಂತ ಅಧಿಕ ಬಿಲ್ಲನ್ನು ನೀಡುತ್ತಿರುವ ನಾವುಗಳು ಎಂದಿಗೂ ರೈತರಿಗೆ ಮೋಸ ಮಾಡುವುದಿಲ್ಲ. ನಮ್ಮ ವಿರೋಧಿಗಳು ಏನೇ ಲೆಕ್ಕಾಚಾರ ಹಾಕಿದರೂ ಇದಕ್ಕೆ ರೈತರು ಸೊಪ್ಪು ಹಾಕುವುದಿಲ್ಲವೆಂದು ಅವರು ತಿಳಿಸಿದರು.
ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭ : ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮನ್ನು ಸೆಪ್ಟೆಂಬರ್ ತಿಂಗಳ ಬದಲಾಗಿ ಅಕ್ಟೋಬರ್ 15ಕ್ಕೆ ಪ್ರಾರಂಭಿಸುವ ಗುರಿಯನ್ನು ಹೊಂದಲಾಗಿದೆ. ಕಬ್ಬು ಅಭಿವೃದ್ಧಿ ವಿಭಾಗದ ಸಿಬ್ಬಂದಿಯವರು ರೈತರೊಂದಿಗೆ ಕೆಲ ಗೊಂದಲಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಬೆನ್ನೆಲಬು ಆಗಿರುವ ರೈತರೊಂದಿಗೆ ಉತ್ತಮವಾಗಿ ವ್ಯವಹರಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಇವರೇನಾದರೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದನ್ನು ಎಚ್ಚರಿಕೆಯ ಗಂಟೆ ಎಂದು ಕಬ್ಬು ಅಭಿವೃದ್ಧಿ ಸಿಬ್ಬಂದಿಯವರು ತಿಳಿದುಕೊಳ್ಳಬೇಕೆಂದು ಛಾಟಿ ಬೀಸಿದರು. 2 ವರ್ಷದೊಳಗೆ ಕಾರ್ಖಾನೆಗೆ ಹೆಚ್ಚಿನ ಲಾಭ ತಂದು ಅಭಿವೃದ್ಧಿಪಡಿಸುವ ಭರವಸೆಯನ್ನೂ ಸಹ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದರು.
ಉದ್ಯಮಿಗಳಾದ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.