Breaking News
Home / ಬೆಳಗಾವಿ / ಕರಡಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಅಸಲಿ ಸಾವು !

ಕರಡಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಅಸಲಿ ಸಾವು !

Spread the love

ಬೆಳಗಾವಿ: ಖಾನಾಪೂರ ತಾಲೂಕಿನ ಅಮಟೆ ಗ್ರಾಮದ ಹೊರವಲಯದ ಕಾಡಿನಲ್ಲಿ ಮಾರ್ಚ್ 11 ರಂದು ಓರ್ವ ವ್ಯಕ್ತಿಯ ಶವ ದೊರೆತಿತ್ತು. ಕರಡಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಗುಲ್ಲೆಬ್ಬಿಸಲಾಗಿತ್ತು. ಆದರೆ, ಪೊಲೀಸರು ವ್ಯಕ್ತಿಯ ಸಾವಿನ ಹಿಂದಿನ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಅದು ಕೊಲೆ ಎಂದು ಸಾಬೀತಾಗಿದೆ.

ಮೃತ ತಾನಾಜಿ ಟೋಪಾ ನಾಯಕ (35) ನನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಐದು ಮಂದಿ ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸಿಂಗಲ್ ಬ್ಯಾರೆಲ್ ಬಂದೂಕು, ಕಾಡತೂಸುಗಳು ಮತ್ತು ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಶವದ ತಲೆ ಮತ್ತು ಬೆನ್ನಿನ ಮೇಲೆ ಗಾಯಗಳಾಗಿರುವುದರಿಂದ, ಮೇಲ್ನೋಟಕ್ಕೆ ಇದು ಕರಡಿ ದಾಳಿಯಿಂದ ಸಂಭವಿಸಿದ ಘಟನೆ ತರಹ ಕಾಣಿಸುತ್ತಿದ್ದರೂ, ಪತಿಯ ಸಾವಿನ ಕುರಿತು ಸಂಶಯ ಇದೆ. ಪೊಲೀಸರು ತನಿಖೆ ನಡೆಸಿ ಸತ್ಯ ತಿಳಿಸಬೇಕೆಂದು ಮೃತನ ಪತ್ನಿ ತೇಜಶ್ವಿನಿ ನಾಯಕ ಖಾನಾಪೂರ ಠಾಣೆಯಲ್ಲಿ ಪ್ರಕರಣ ನಡೆದ ದಿನದಂದೇ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ಮೃತನ ಶವಪರೀಕ್ಷೆ ನಡೆಸಲಾಗಿ, ಆತನ ಸಾವು ಬಂದೂಕಿನಿಂದ ಹಾರಿಸಿದ ಗುಂಡಿನಿಂದ ಆಗಿರುವುದು ಬೆಳಕಿಗೆ ಬಂದಿತು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅಮಟೆ ಗ್ರಾಮದ ದೇವಿದಾಸ ಗಾವಕರ (28), ಸಂತೋಷ ಗಾವಕರ (32), ವಿಠ್ಠಲ ನಾಯಕ (40), ರಾಮಾ ನಾಯಕ (21) ಮತ್ತು ಜಾಂಬೋಟಿಯ ಪ್ರಶಾಂತ ಸುತಾರ (28) ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳು ಕೊಲೆ ಮಾಡಿದ ಬಳಿಕ ಸಾಕ್ಷಿ ಸಾಶ ಮಾಡುವ ಉದ್ದೇಶದಿಂದ ಶವದ ಮೇಲೆ ಗಾಯಗಳನ್ನು ಮಾಡಿ ಇದು ಕಾಡುಪ್ರಾಣಿಯ ಹಲ್ಲೆಯಿಂದ ನಡೆದ ಘಟನೆ ಎಂದು ಬಿಂಬಿಸಲು ಯತ್ನಿಸಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಕೊಲೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಎಸ್ ಪಿ ಲಕ್ಷ್ಮಣ ನಿಂಬರಗಿ ಮತ್ತು ಎಎಸ್ ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿಎಸ್.ಪಿ ಕರುಣಾಕರ ಶೆಟ್ಟಿ ತನಿಖೆಯನ್ನು ಕೈಗೊಂಡಿದ್ದಾರೆ. ಖಾನಾಪೂರ ಸಿಪಿಐ ಸುರೇಶ ಶಿಂಗಿ, ಪಿಎಸ್ ಐ ಬಸನಗೌಡ ಪಾಟೀಲ, ಸಿಬ್ಬಂದಿಗಳಾದ ಶಿವಕುಮಾರ ಬಳ್ಳಾರಿ, ಅರುಣ ಹುಕ್ಕೇರಿ, ಜಗದೀಶ ಕಾದ್ರೊಳ್ಳಿ, ಸತೀಶ ಮಾಂಗ, ಶಿವಕುಮಾರ ತುರಮಂದಿ, ಸಿದ್ಧರಾಮ ಪೂಜಾರಿ, ಉಳವಪ್ಪಾ ಪಾಟೀಲ, ಷರೀಫ ದಫೇದಾರ, ಫಕೀರಪ್ಪ ದುರದುಂಡಿ, ಪ್ರವೀಣ ಹೊಂಡದ, ನಾಗೇಂದ್ರ ಇಂಚಲ, ಶಿವಾನಂದ ಸಾತಪ್ಪನವರ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಶ್ರಮಿಸಿದರು.

ವರದಿ :ಮಲ್ಲು ಬೋಳನವರ


Spread the love

About Ad9 Haberleri

Check Also

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ

Spread the loveಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ …