ಮೂಡಲಗಿ: ಮೂಡಲಗಿ ನೂತನ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನವು ಇದೇ ಮಾ. 14ರಂದು ಒಂದು ದಿನ ಸ್ಥಳೀಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅನಾವರಣಕ್ಕೆ ಎಲ್ಲ ರೀತಿಯ ಸಿದ್ಧಗೊಂಡಿದೆ.
ಸೋಮವಾರದಂದು ಶ್ರೀಪಾದಬೋಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀಧರ ಸ್ವಾಮೀಜಿಗಳು ಸಮ್ಮೇಳನದ ಆಮಂತ್ರಣ ಪತ್ರಿಕೆ ಮತ್ತು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಉದ್ಘಾಟನೆ: ಮಾ. 14ರಂದು ಬೆಳಿಗ್ಗೆ 11ಕ್ಕೆ ಕವಿ ಪಾಶ್ರ್ವಪಂಡಿತ ವೇದಿಕೆಯಲ್ಲಿ ಶ್ರೀಪಾದಬೋಧ ಸ್ವಾಮೀಜಿ ಮತ್ತು ಸುಣಧೋಳಿಯ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಸಮ್ಮೇಳನವನ್ನು ಉದ್ಘಾಟಿಸುವರು.
ಸಮ್ಮೇಳನದ ಅಧ್ಯಕ್ಷತೆವಹಿಸಿರುವ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಅಧ್ಯಕ್ಷೀಯ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ, ವಿಧಾನ ಪರಿಷತ ಸದಸ್ಯರಾದ ವಿವೇಕರಾವ ಪಾಟೀಲ, ಹಣಮಂತ ನಿರಾಣಿ, ಅರುಣ ಶಹಾಪುರ ಭಾಗವಹಿಸುವರು. ದೆಹಲಿಯ ನಿವೃತ್ತ ಹೆಚ್ಚುವರಿ ದೂರದರ್ಶನ ಮಹಾನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಪುಸ್ತಕ ಬಿಡುಗಡೆ ಮಾಡುವರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿ, ಬಾಲಶೇಖ ಬಂದಿ ಪ್ರಾಸ್ತಾವಿಕ ನುಡಿ ಮತ್ತು ಸಿದ್ರಾಮ ದ್ಯಾಗಾನಟ್ಟಿ ಸ್ವಾಗತ ನುಡಿ ಹೇಳುವರು.
ಧ್ವಜಾರೋಹಣ: ಉದ್ಘಾಟನಾ ಪೂರ್ವದಲ್ಲಿ ಬೆಳಿಗ್ಗೆ 7.30ಕ್ಕೆ ಸಮ್ಮೇಳನದ ಆವರಣದಲ್ಲಿ ರಾಷ್ಟ್ರಧ್ವಜವನ್ನು ತಹಶೀಲ್ದಾರ್ ಡಿ.ಜಿ ಮಹಾತ, ನಾಡ ಧ್ವಜವನ್ನು ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಪರಿಷತ್ ಧ್ವಜವನ್ನು ಕಸಾಪ ತಾಲ್ಲೂಕಾ ಘಟಕ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ನೆರವೇರಿಸುವರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಬೆಳಿಗ್ಗೆ 8ಕ್ಕೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜರುಗಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ನೇತೃತ್ವವನ್ನು ಬಿಇಒ ಅಜೀತ ಮನ್ನಿಕೇರಿ, ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ವಹಿಸುವರು. ಉದ್ಘಾಟನೆಯನ್ನು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ದೀಪಕ ಹರ್ದಿ, ಜಿ.ಬಿ. ಬಳಿಗಾರ, ರಾಜೇಂದ್ರ ಡಿ. ತೇರದಾಳ ಮತ್ತು ಪುರಸಭೆಯ ಎಲ್ಲ ಸದಸ್ಯರು ಭಾಗವಹಿಸುವರು.
ಚಿಂತನ ಗೋಷ್ಠಿ: ಮಧ್ಯಾಹ್ನ 2ಕ್ಕೆ ಜರಗುವ ಚಿಂತನ ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಲ್ ಡಾ. ಪರಶುರಾಮ ನಾಯಿಕ ವಹಿಸುವರು. ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ಚಿಂತಕ ಸಿದ್ಧಾರ್ಥ ವಾಡೆನ್ನವರ ಮುಖ್ಯ ಅತಿಥಿಗಳಾಗಿರುವರು.
ತಾಲ್ಲೂಕಿನ ಸಾಹಿತ್ಯಾವಲೋಕನ ಕುರಿತು ಮಾರುತಿ ದಾಸನ್ನವರ, ಜಾನಪದ ಪರಂಪರೆ ಕುರಿತು ಕುಲಗೋಡದ ರಮೇಶ ಕೌಜಲಗಿ, ಆಧ್ಯಾತ್ಮಿಕ ಪರಂಪರೆ ಕುರಿತು ಚಿದಾನಂದ ಹೂಗಾರ, ಕೃಷಿ ಮುನ್ನೋಟ ಕುರಿತು ರಾಜಾಪುರದ ರಾಜು ಬೈರುಗೋಳ ಪ್ರಬಂಧ ಮಂಡನೆ ಮಾಡುವರು.
ಮಧ್ಯಾಹ್ನ 3.30ಕ್ಕೆ ಜರುಗುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಮಹಾದೇವ ಜಿಡ್ಡಿಮನಿವಹಿಸುವರು, ಖಾನಟ್ಟಿಯ ಮಹಾದೇವ ಪೋತರಾಜ ಆಶಯ ನುಡಿ ಹೇಳುವರು. ತಾಲ್ಲೂಕಿನ 34 ಕವಿ, ಕವಯತ್ರಿಯರು ಸ್ವರಚಿತ ಕವಿತೆ ವಾಚಿಸುವರು.
ಸಾಧಕರ ಸನ್ಮಾನ: ಸಂಜೆ 5ಕ್ಕೆ ಸಾಧಕರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಡೇರಹಟ್ಟಿ ನಾರಾಯಣ ಶರಣರು ವಹಿಸುವರು. ಮುಖ್ಯ ಅತಿಥಿಗಳಾಗಿ ವೈ.ಎಂ. ಗುಜನಟ್ಟಿ, ವೆಂಕಟೇಶ ಮುರನಾಳ, ಪ್ರಕಾಶ ಹಿರೇಮಠ, ಪ್ರಾಚಾರ್ಯರಾದ ಡಾ. ಆರ್.ಎ. ಶಾಸ್ತ್ರೀಮಠ, ಡಾ. ಆರ್.ಬಿ. ಕೊಕಟನೂರ ಭಾಗವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 31 ಸಾಧಕರಿಗೆ ಸನ್ಮಾನ ಇರುವುದು.
ಸಮಾರೋಪ: ಸಂಜೆ 6ಕ್ಕೆ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮುನ್ಯಾಳ, ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿವಹಿಸುವರು. ಪ್ರೊ. ಶಿವಾನಂದ ಬೆಳಕೂಡ ಅಧ್ಯಕ್ಷತೆವಹಿಸುವರು. ಪ್ರೊ. ಚಂದ್ರಶೇಖರ ಅಕ್ಕಿ ಸಮಾರೋಪ ಭಾಷಣ, ಪ್ರೊ. ಸಂಗಮೇಶ ಗುಜಗೊಂಡ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಹೆಗ್ಗಳಗಿ, ಮಹಾಲಿಂಗ ಮಂಗಿ ಭಾಗವಹಿಸುವರು.
ಸಾಂಸ್ಕಂತಿ ಸೌರಭ: ಸಂಜೆ 7.30ಕ್ಕೆ ಸಾಂಸ್ಕಂತಿ ಸೌರಭಕ್ಕೆ ಕಲಾವಿದ ಶಬ್ಬಿರ ಡಾಂಗೆ ಅಧ್ಯಕ್ಷತೆಯಲ್ಲಿ ಸಂಗೀತಗಾರ ಬಸವರಾಜ ಮುಗಳಕೋಡ ಚಾಲನೆ ನೀಡುವರು. ವಿವಿಧ ಕಲಾ ತಂಡಗಳಿಂದ ವೈವಿಧ್ಯಮಯವಾದ ಕಲಾ ಪ್ರದರ್ಶನ ಇರುವುದು.
ಸಮ್ಮೇಳನದ ಎಲ್ಲ ರೀತಿಯ ಪೂರ್ವ ತಯಾರಿಯಾಗಿದ್ದು, ವಿವಿಧ ಸಮಿತಿಗಳ ಸದಸ್ಯರು ಸಮ್ಮೇಳನದ ಯಶಸ್ಸಿಗೆ ಕಾರ್ಯೋನ್ಮುಖರಾಗಿದ್ದಾರೆ. ಸಮ್ಮೇಳನದ ಯಶಸ್ಸಿಗೆ ಎಲ್ಲ ಕನ್ನಡ ಮನಸ್ಸುಗಳು ಸಹಕಾರ ನೀಡಬೇಕು ಎಂದು ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶವಿದ್ದು, ಆಸಕ್ತರು ಭಾಗವಹಿಸಲು ತಿಳಿಸಿದ್ದಾರೆ.