ಬೆಳಗಾವಿ: ಬಿಜೆಪಿಯಲ್ಲಿ ಈಗ ಎಲ್ಲವೂ ಸರಿ ಉಳಿದಿಲ್ಲ ಎಂಬುದಕ್ಕೆ ಇಂದು ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಮಗಳ ಮದುವೆ ಸಾಕ್ಷಿಯಾಯಿತು.
ಸಂಪುಟ ವಿಸ್ತರಣೆಗೆ ಮುಂಚೆ ಸುಮಾರು ಒಂದೂವರೆ ತಿಂಗಳ ಕಾಲ ಯಡಿಯೂರಪ್ಪ ಸುತ್ತ ಕತ್ತಿ ಗಿರಕಿ ಹೊಡೆಯುತ್ತಿದ್ದರು. ಮುಂಜಾನೆಯ ವಾಕಿಂಗ್, ಉಪಹಾರ ಸೇರಿದಂತೆ ಸಂಜೆಯ ಊಟಕ್ಕೂ ಯಡಿಯೂರಪ್ಪ ಜೊತೆ ಇರುತ್ತಿದ್ದರು. ಅವರ ಜೊತೆ ಅವರ ಕಾರಿನಲ್ಲಿಯೇ ಅಡ್ಡಾಡುತ್ತಿದ್ದರು. ಆದರೆ, ವಿಸ್ತರಣೆ ಸಂದರ್ಭದಲ್ಲಿ ತಮ್ಮ ಹೆಸರನ್ನು ಕೈಬಿಟ್ಟ ಬಳಿಕ ಉಮೇಶ ಕತ್ತಿ ಯಡಿಯೂರಪ್ಪನವರ ಜೊತೆ ಕಾಣಿಸಿಕೊಂಡಿಲ್ಲ.
ಇಬ್ಬರ ನಡುವೆ ಮುನಿಸು ಹೆಚ್ಚಾಗಿದ್ದು, ಒಬ್ಬರ ಮುಖ ಇನ್ನೊಬ್ಬರು ನೋಡುವುದನ್ನು ಕೂಡ ತಪ್ಪಿಸಿಕೊಳ್ಳುತ್ತಿದ್ದಾರೆ. ಇಂದು ಮುಂಜಾನೆ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಮೇಶ ಕತ್ತಿ, ‘ಇನ್ನೇನು 15 ನಿಮಿಷದಲ್ಲಿ ಸಿಎಂ ಬರುತ್ತಾರೆ’ ಎಂದು ಪತ್ರಕರ್ತರು ಅವರಿಗೆ ಹೇಳಿದರೂ, ‘ನನಗೆ ಇನ್ನೊಂದು ಮದುವೆಗೆ ಹೋಗಬೇಕಾಗಿದೆ’ ಎಂದು ಹೇಳುತ್ತ ಗಡಿಬಿಡಿಯಲ್ಲಿ ಅಲ್ಲಿಂದ ಕಾಲ್ಕಿತ್ತರು.
“ನನಗೆ ಯಡಿಯೂರಪ್ಪ ಮೇಲೆ ಯಾವುದೇ ಮುನಿಸು ಇಲ್ಲ. ಅವರೇ ನಮ್ಮ ನಾಯಕರು. ಜನತೆ, ದೇವರು ಆಶೀರ್ವಾದ ಮಾಡಿದರೆ ಮುಂದೆ ಮಂತ್ರಿ ಅಷ್ಟೇ ಅಲ್ಲ, ಮುಖ್ಯಮಂತ್ರಿಯೂ ಆಗುತ್ತೇನೆ. ಈಗ ನನಗೆ 60 ವರ್ಷ ಪೂರ್ಣವಾಗಿದೆ. ಇನ್ನೂ 20 ವರ್ಷ ರಾಜಕೀಯದಲ್ಲಿರುತ್ತೇನೆ” ಎಂದು ಉಮೇಶ ಕತ್ತಿ ಇದೇ ಸಂದರ್ಭದಲ್ಲಿ ಹೇಳಿದರು.
ಆದರೆ, ಸಚಿವ ಶ್ರೀಮಂತ ಪಾಟೀಲ ಮತ್ತು ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತ್ರ ಸಿಎಂ ಬರುವವರೆಗೆ ಕಾದು ಅವರನ್ನು ಭೇಟಿ ಮಾಡಿ ನಂತರ ತೆರಳಿದರು. ಬೆಂಕಿಗೆ ತುಪ್ಪ ಸುರಿದ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ, ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಪಕ್ಷಕ್ಕೆ ವಲಸೆ ಬಂದವರಿಗೆ ಉನ್ನತ ಸ್ಥಾನಮಾನ ನೀಡಿದ್ದರಿಂದ ದಶಕಗಳಿಂದ ಬಿಜೆಪಿ ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಯಾವುದೇ ಸಂದರ್ಭದಲ್ಲಿ ಅತೃಪ್ತಿ ಸ್ಫೋಟಗೊಂಡು, ಸರ್ಕಾರ ಪತನಗೊಳ್ಳುವ ಮೂಲಕ ಸದ್ಯದಲ್ಲಿಯೇ ಇನ್ನೊಂದು ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.
ವರದಿ :ಮಲ್ಲು ಬೋಳನವರ