ಬೆಳಗಾವಿ: ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸರ್ಕಾರದ ನಿರ್ದೇಶನ ಮೀರಿ ವಿವಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗಲಿಬಿಲಿಗೊಂಡ ಪ್ರಸಂಗ ನಡೆಯಿತು.
ಇಂದು ಬೆಳಗಾವಿಯ ಶಗುನ ಗಾರ್ಡನ್ ನಲ್ಲಿ ಕವಟಗಿಮಠ ಪುತ್ರಿಯ ವಿವಾಹ ನೆರವೇರಿತು. ಮೊದಲು ಕೊರೊನಾ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸವನ್ನು ರದ್ದುಪಡಿಸಿದ್ದ ಯಡಿಯೂರಪ್ಪ, ಬಳಿಕ ಆತ್ಮೀಯತೆ ಹಿನ್ನೆಲೆಯಲ್ಲಿ ಮತ್ತೆ ಬರಲು ಒಪ್ಪಿಕೊಂಡು ಬಂದಿದ್ದರು.
ಯಾವುದೇ ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಜನ ಒಂದು ಕಡೆ ಸೇರಬಾರದು ಎಂದು ಸರ್ಕಾರ ನಿರ್ದೆಶನ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಆದೇಶ ಹೊರಡಿಸಿದ್ದಾರೆ. ಹಾಗಿರುವಾಗ ಸ್ವತಃ ಮುಖ್ಯಮಂತ್ರಿಯೇ ತನ್ನದೇ ಆದೇಶವನ್ನು ಉಲ್ಲಂಘಿಸಿ, ಸಾವಿರಾರು ಜನರು ಸೇರಿದ್ದ ಮದುವೆಯಲ್ಲಿ ಪಾಲ್ಗೊಂಡಿರುವುದು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಗಲಿಬಿಲಿಗೊಂಡ ಯಡಿಯೂರಪ್ಪ, ಪ್ರತಿಕ್ರಿಯೆ ನೀಡದೆಯೇ ಹೋಗಿ ಬಿಟ್ಟರು. ಇದಕ್ಕೂ ಮೊದಲು ಮಾತನಾಡಿದ ಯಡಿಯೂರಪ್ಪ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ವಿವಾಹದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಶ್ರೀಮಂತ ಪಾಟೀಲ, ಶಶಿಕಲಾ ಜೊಲ್ಲೆ, ಸಂಸದೆ ಶೋಭಾ ಕರಂದ್ಲಾಜೆ, ಪ್ರಭಾಕರ ಕೋರೆ, ಶಾಸಕರಾದ ಗಣೇಶ ಹುಕ್ಕೇರಿ, ಉಮೇಶ ಕತ್ತಿ, ಅನಿಲ ಬೆನಕೆ, ಮಹೇಶ ಕುಮಠಳ್ಳಿ, ಅಭಯ ಪಾಟೀಲ, ಶಾಮನೂರು ಶಿವಶಂಕರಪ್ಪ, ಗಣ್ಯರಾದ ಪ್ರಕಾಶ ಹುಕ್ಕೇರಿ, ಸಂಜಯ ಪಾಟೀಲ, ಅಲ್ಲಂಪ್ರಭು ಪಾಟೀಲ, ಅಮರಸಿಂಹ ಪಾಟೀಲ ಸೇರದಂತೆ 50ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಮಂಟಪದ ಹೊರಗೆ ಕೈ ಸ್ವಚ್ಛತೆಗಾಗಿ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಾಸ್ಕ್ ಕೊರತೆ ಇತ್ತು. ಹೀಗಾಗಿ ಬಹುತೇಕ ಜನರು ಮಾಸ್ಕ್ ಇಲ್ಲದೆ ವಿವಾಹದಲ್ಲಿ ಪಾಲ್ಗೊಂಡಿದ್ದರು.
ವರದಿ :ಮಲ್ಲು ಬೋಳನವರ