
ಬೆಂಗಳೂರು : ಫೆಬ್ರುವರಿ 1 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯನ್ನು ತಲಾ 2 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷಷರುರ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳಿಂದ ನಮ್ಮ ನಂದಿನಿ ಹಾಲು ಹಾಗೂ ಮೊಸರಿನ ಬೆಲೆ ಏರಿಕೆ ಮಾಡಿಲ್ಲ. ರಾಜ್ಯದ ಎಲ್ಲ ಒಕ್ಕೂಟಗಳಿಂದ ಬಂದ ಒಕ್ಕೋರಲಿನಿಯ ಬೇಡಿಕೆಯನ್ವಯ ಈ ದರಗಳಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ 14 ಒಕ್ಕೂಟಗಳಿಂದ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯನ್ನು ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಹಾಲು ಮತ್ತು ಮೊಸರು ದರದಲ್ಲಿ ಈಗಿರುವ ದರವನ್ನು 4 ರೂ.ಗಳಿಗೆ ಹೆಚ್ಚಳ ಮಾಡುವಂತೆ ಒಕ್ಕೂಟಗಳು ಕರ್ನಾಟಕ ಹಾಲು ಮಹಾಮಂಡಳಿಯನ್ನು ಕೋರಿದ್ದವು. ಅಲ್ಲದೇ ಜನೇವರಿ 17 ರಂದು ನಡೆದ ಹಾಲು ಮಹಾಮಂಡಳಿಯ ಆಡಳಿತ ಮಂಡಳಿಯ ಸಭೆಯಲ್ಲಿ ದರ ಹೆಚ್ಚಳ ಮಾಡುವ ಅಧಿಕಾರವನ್ನು ನನಗೆ ಸಂಪೂರ್ಣವಾಗಿ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಅವರ ಭೇಟಿ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
2 ರೂ.ಗೆ ಏರಿಸಲಿರುವ ಈ ದರದಲ್ಲಿ 1 ರೂ.ನ್ನು ನೇರವಾಗಿ ರೈತರಿಗೆ ನೀಡುವುದು. ರಾಜ್ಯದಲ್ಲಿ ನಮ್ಮ ಒಕ್ಕೂಟಗಳಿಗೆ ಹಾಲು ಪೂರೈಕೆ ಮಾಡುವ ರೈತರ ಸುಮಾರು 12 ಲಕ್ಷ ಹಸುಗಳಿಗೆ ವಿಮೆ ಮಾಡುವ ಸಲುವಾಗಿ 40 ಪೈಸೆ ತೆಗೆದಿರಿಸಲಾಗುವುದು. ಇದರಿಂದ ವಾರ್ಷಿಕವಾಗಿ 60-70 ಕೋಟಿ ರೂ.ಗಳು ವಿಮೆಗೆ ಒಳಪಡಲಿವೆ. 40 ಪೈಸೆ ಹಾಲು ಮಾರಾಟ ಮಾಡುವ ಏಜೆಂಟರಿಗೆ ನೀಡಲಾಗುವುದು. ಉಳಿದ 20 ಪೈಸೆಯನ್ನು ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ರೂಪದಲ್ಲಿ ನೀಡಲು ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ ಎಂದು ಕೆಎಂಎಫ್ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗುರುವಾರ ಬೆಳಿಗ್ಗೆ ಕೆಎಂಎಫ್ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಛೇರಿಯಲ್ಲಿ ಭೇಟಿ ಮಾಡಿ ದರ ಹೆಚ್ಚಳದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಮುಖ್ಯಮಂತ್ರಿಗಳ ಅನುಮತಿ ಪಡೆದ ಬಳಿಕ ನಂದಿನಿ ಹಾಲು ಹಾಗೂ ಮೊಸರು ಬೆಲೆಯನ್ನು ಪರಿಷ್ಕರಿಸಲಾಗಿದೆ. ಬರುವ ಫೆ. 1 ರಿಂದ ನಂದಿನಿ ಹಾಲು ಹಾಗೂ ಮೊಸರಿನ ಹೊಸ ದರಗಳು ಜಾರಿಗೆ ಬರಲಿವೆ ಎಂದು ಅವರು ಹೇಳಿದರು.
Ad9 News Latest News In Kannada