ಬೆಳಗಾವಿ: ನಾಳೆಯಿಂದ ಮೇ 24ವರೆಗೂ ಲಾಕ್‍ಡೌನ್‍ಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಕೋವಿಡ್ ಗೈಡ್‍ಲೈನ್ಸ್ ಯಾರಾದ್ರೂ ಉಲ್ಲಂಘಿಸಿದ್ರೆ ಕಾನೂನು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯವರು ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಬೈಕ್, ಕಾರ್‍ಗಳಲ್ಲಿ ರಸ್ತೆಗೆ ಅನವಶ್ಯಕವಾಗಿ ಬರಬೇಡಿ. ನಿಮ್ಮ ಮನೆ ಸಮೀಪದ ಹಾಲಿನ ಅಂಗಡಿ, ಮೆಡಿಕಲ್ ಶಾಪ್, ತರಕಾರಿ, ದಿನಸಿ ವಸ್ತುಗಳನ್ನು ನಡೆದುಕೊಂಡು ಹೋಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಖರೀದಿ ಮಾಡಿ. ಕೇವಲ ತುರ್ತು ಸೇವೆಗಳಾದ ಆರೋಗ್ಯ ಸೇವೆ, ಕೊರೊನಾ ಸೋಂಕಿತರಿಗೆ, ಗರ್ಭಿಣಿಯರಿಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಇನ್ನುಳಿದವರಿಗೆ ಯಾವುದೇ ರೀತಿ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಒಂದು ವೇಳೆ ಅನಗತ್ಯವಾಗಿ ರಸ್ತೆಗೆ ಇಳಿಯುವ ವಾಹನಗಳನ್ನು ಸೀಜ್ ಮಾಡಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಇನ್ನು ಅಂತರ್‍ರಾಜ್ಯ, ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಮದುವೆಗಳಿಗೆ ಕೇವಲ 40 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಗೆ ಐದು ಜನರಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ಎಲ್ಲಾ ಕಾರ್ಯಕ್ರಮಗಳನ್ನು ರದ್ಧುಗೊಳಿಸಲಾಗಿದೆ. ಕೋವಿಡ್ ಗೈಡ್‍ಲೈನ್ಸ್ ಯಾರಾದ್ರೂ ಉಲ್ಲಂಘಿಸಿದ್ರೆ ಕಾನೂನು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದರು.
ಎಲ್ಲಿಯಾದ್ರೂ ರೆಮಡಿಸಿವಿರ್, ಆಕ್ಸಿಜನ್ ಸಿಲಿಂಡರ್ ಕಳಸಂತೆಯಲ್ಲಿ ಏನಾದ್ರು ಮಾರಾಟ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ನಮ್ಮ ಪೊಲೀಸ್ ಇಲಾಖೆಯ ಡಯಲ್ 112ಗೆ ತಿಳಿಸಿ, ನಿಮಗೆ ಯಾವುದೇ ರೀತಿ ಸಹಾಯ, ಸಹಕಾರ ಬೇಕಿದ್ದರೂ 112 ನಂಬರ್ ಸಂಪರ್ಕಿಸಬಹುದು. ಇನ್ನು ಪೊಲೀಸರಿಗೂ ಕೂಡ ಕುಟುಂಬವಿದೆ. ಆದರೆ ಸಮಾಜ ಸೇವೆಯೇ ಅವರ ಮುಖ್ಯಧ್ಯೇಯವಾಗಿದೆ. ನಿಮ್ಮ ಆರೋಗ್ಯ ಹಾಗೂ ಸಮಾಜದ ಆರೋಗ್ಯ ಕಾಪಾಡುವುದು ಪೊಲೀಸ್ ಇಲಾಖೆ ಜವಾಬ್ದಾರಿಯಾಗಿದೆ. ಆದ್ದರಿಂದ ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಎಲ್ಲ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಒಟ್ಟಾರೆ ಯಾರಾದ್ರೂ ಕಾನೂನು ಮೀರಿ ಉಲ್ಲಂಘನೆ ಮಾಡಿದ್ರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಎಸ್‍ಪಿ ಲಕ್ಷ್ಮಣ ನಿಂಬರಗಿ ಜಿಲ್ಲೆಯ ಜನತೆಗೆ ಎಚ್ಚರಿಕೆ ನೀಡಿದ್ದಾರೆ.