ಗೋಕಾಕ: ಆಹಾರ ಸಚಿವ ಉಮೇಶ ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆಯಿಂದ ರಾಸಾಯನಿಕ ತ್ಯಾಜ್ಯ ನೀರು ಹಳ್ಳಕ್ಕೆ ಬಿಡುತ್ತಿರುವದನ್ನು ಖಂಡಿಸಿ ಪಾಮಲದಿನ್ನಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸಚಿವ ಕತ್ತಿ ಒಡೆತನದ ವಿಶ್ವರಾಜ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದ ತಾಜ್ಯ ಮಿಶ್ರಿತ ರಾಸಾಯನಿಕ ನೀರು ಬಿಡುತ್ತಿರುವ ಬಗ್ಗೆ ಈಗಾಗಲೇ ತಹಶಿಲ್ದಾರ ಸೇರಿ ಜಿಲ್ಲಾಧಿಕಾರಿಗಳ ವರೆಗೆ ದೂರು ನೀಡಿದ್ದರು ಯಾವುದೇ ಕ್ರಮ ಜರಗಿಸಿಲ್ಲ. ಹಳ್ಳದಲ್ಲಿ ಜಾನುವಾರಗಳ ಮೈತೊಳೆದ ಹಿನ್ನಲೆ ಜಾನುವಾರುಗಳು ಚರ್ಮ ರೋಗ ಹಾಗೂ ಇನ್ನಿತರ ರೋಗಳಿಂದ ಬಳಲಿ ಪ್ರಾಣ ಬಿಡುತ್ತಿವೆ. ಈ ಕೂಡಲೇ ಸಕ್ಕರೆ ಕಾರ್ಖಾನೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸ್ಥಳಿಯರು ಆಗ್ರಹಿಸಿದರು.
ರೈತ ಮುಖಂಡ ರಾಮಪ್ಪ ಡಬಾಜ ಮಾತನಾಡಿ, ರಾಸಾಯನಿಕ ತ್ಯಾಜ್ಯಯುಕ್ತ ಈ ನೀರು ಕುಡಿದು ದನಕರುಗಳು ಸಾವನ್ನಪ್ಪುತ್ತಿವೆ. ಕತ್ತಿಯವರು ಸಚಿವರಾಗಲು ಲಾಯಕ ಇಲ್ಲಾ, ಮಳ್ಳಿ ನೀರು ನಿಲ್ಲಿಸದಿದ್ದರೆ ಅವರ ಮನೆ, ಫ್ಯಾಕ್ಟರಿ ಹಾಗೂ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವದು. ನಾವು ಸ್ವತಃ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಸಚಿವರ ಕಾರ್ಖಾನೆ ಪ್ರಾರಂಭದ ದಿನಗಳಿಂದಲೂ ಕಾರ್ಖಾನೆಯಿಂದ ಮಳ್ಳಿ ನೀರನ್ನು ಬಿಡುತ್ತಲೇ ಬಂದಿದ್ದಾರೆ. ಆತ ಕತ್ತಿಯಲ್ಲ, ಕತ್ತೆ ಇದ್ದ ಹಾಗೆ ಎಂದು ಆಕ್ರೋಶವನ್ನು ಹೊರಹಾಕಿದರು.
ಇನ್ನೋರ್ವ ಪ್ರತಿಭಟನಾಕಾರ ಲಕ್ಕಪ್ಪ ರಾಜಾಪೂರ ಮಾತನಾಡಿ, ಕೂಡಲೇ ಉಮೇಶ ಕತ್ತಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜಾಗನೂರ, ಪಾಮಲದಿನ್ನಿ, ಬಡಿಗವಾಡ, ರಾಜಾಪೂರ, ಕಲ್ಲೋಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ವರೆಗೆ ಈ ಹಳ್ಳದ ನೀರು ಹರಿಯುತ್ತಿದ್ದು, ಸಾವಿರಾರು ಜನರಿಗೆ ಆರೋಗ್ಯ ಸಮಸ್ಯೆಗಳಾಗುತ್ತಿವೆ. ಸಚಿವರು ಸಹ ಇಂತಹ ನೀರನ್ನು ತಮ್ಮ ಕುಟುಂಬ ಸಮೇತ ಸೇವನೆ ಮಾಡಬೇಕು ಎಂದು ಗುಡುಗಿದರು.
ಸಚಿವ ಕತ್ತಿಯವರು ತಮ್ಮ ಪ್ರಭಾವ ಬಳಸಿ ತಹಶಿಲ್ದಾರ ಹಾಗೂ ಜಿಲ್ಲಾಧಿಕಾರಿಗಳನ್ನು ನಿಂತ್ರಿಸುವ ಕಾರ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಕತ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಕಳೆದ ನಾಲ್ಕು ವರ್ಷಗಳಿಂದ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ನೀರು ಬಿಡುತ್ತಿರುವ ಬಗ್ಗೆ ದೂರು ನೀಡಿದರು ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರ ಅಳಲು.
ಬಾಕ್ಸ: ತಾಲೂಕಿನ ಪಾಮಲದಿನ್ನಿ ಗ್ರಾಮದ ಪಕ್ಕದಲ್ಲಿರುವ ಹಳ್ಳಕ್ಕೆ ವಿಶ್ವರಾಜ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಬಿಡುತ್ತಿದ್ದು, ಇದೆ ಹಳ್ಳದಲ್ಲಿ ಜಾನುವಾರು ಮೈತೊಳೆದ ಹಿನ್ನಲೆ ಜಾನುವಾರು ಮೈಮೇಲೆ ದಪ್ಪನೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಅವುಗಳ ಚಿಕಿತ್ಸೆ ನೀಡಲು ರೈತರು ಪರದಾಡುವಂತಾಗಿದೆ. ಅಲ್ಲದೇ ಜಾನುವಾರುಗಳ ಆರೋಗ್ಯದಲ್ಲೂ ಎರುಪೇರಾಗಿ ಈವರೆಗೆ ಹತ್ತಕ್ಕೂ ಜಾನುವಾರುಗಳು ಅಸುನಿಗಿವೆ. ಸಚಿವ ಕತ್ತಿ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಸ್ಥಳಿಯರು ಆಗ್ರಹಿಸಿದ್ದಾರೆ.