ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಗಸೋಗಿನಲ್ಲಿ ಬಂದು, ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ.
ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದ ಚಂದ್ರಶೇಖರ್ ಹಲವು ಪುಸ್ತಕಗಳನ್ನೂ ಬರೆದಿದ್ದರು. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದರು.
ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಆಗಮಿಸಿದ್ದು, ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೋಟೆಲ್ ನಲ್ಲಿ ರಿಸಪ್ಶನ್‌ನಲ್ಲಿಯೇ ಚಾಕು ಇರಿದು ಹಂತಕರು ಪರಾರಿಯಾಗಿದ್ದಾರೆ.
ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. “ಜುಲೈ 2 ರಂದು ಹೋಟೆಲ್‌ಗೆ ಆಗಮಿಸಿದ್ದ ಚಂದ್ರಶೇಖರ್ ಗುರೂಜಿ ನಾಳೆ ಹೋಟೆಲ್ ರೂಮ್ ಖಾಲಿ ಮಾಡಬೇಕಿತ್ತು. ಇಂದು ಬೆಳಗ್ಗೆ ರಿಶಪ್ಶನ್‌ನಲ್ಲಿ ಕುಳಿತಿದ್ದ ವೇಳೆ ಬಂದ ದುಷ್ಕರ್ಮಿಗಳು ಕಾಲಿಗೆ ನಮಸ್ಕಾರ ಮಾಡುವಂತೆ ನಟಿಸಿ ಅವರಿಗೆ ಚಾಕು ಇರಿದಿದ್ದಾರೆ’ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕದ ಮನೆಮಾತಾಗಿದ್ದರು. ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು.
ಸಿಜಿ ಪರಿವಾರ್ ಗ್ಲೋಬಲ್ ವಿಷನ್‌ನ ಚೇರ್ಮನ್ ಕೂಡ ಆಗಿದ್ದ ಚಂದ್ರಶೇಖರ್ ಗುರೂಜಿ 2016ರಲ್ಲಿ ಸರಳ ಜೀವನ ಎನ್ನುವ ಇನ್ಫೋ ಎಂಟರ್‌ಟೇನ್‌ಮೆಂಟ್ ಟಿವಿ ಚಾನೆಲ್ ಅನ್ನೂ ಆರಂಭ ಮಾಡಿದ್ದರು. ಚಂದ್ರಶೇಖರ ಗುರೂಜಿಯವರು 2002 ರಲ್ಲಿ ಸಿಜಿ ಪರಿವಾರ್ ಎನ್ನುವ ಎಂಬ ಖಾಸಗಿ ಲಿಮಿಟೆಡ್ ಕಂಪನಿಯನ್ನು ಆರಂಭಿಸಿದ್ದರು. ಆ ಮೂಲಕ 350 ಕ್ಕೂ ಹೆಚ್ಚು ಶಿಷ್ಯರು ಮತ್ತು ಅನುಯಾಯಿಗಳೊಂದಿಗೆ ಸರಳ ವಾಸ್ತು ವಿಚಾರವನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.