ಧಾರವಾಡ: ‘ಐಐಟಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಧಾರವಾಡ ಭೇಟಿಗಾಗಿ ಜಿಲ್ಲಾಡಳಿತವು ರಾಜ್ಯ ಸರ್ಕಾರದ₹9.49ಕೋಟಿ ಖರ್ಚು ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಮೋದಿ ಭೇಟಿ ಬಿಜೆಪಿಗೆ ಅನಿವಾರ್ಯವಿರಬಹುದು. ಆದರೆ ರಾಜ್ಯದ ಜನತೆಗೆ ಹೊರೆಯಾಗಿದೆ’ ಎಂದು ಜೆಡಿಎಸ್‌ನ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ದೂರಿದರು.
ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ಕೊಡದ ಹಾಗೂ ಕೇಂದ್ರದ ವಿಶೇಷ ಅನುದಾನ ನೀಡದ ಪ್ರಧಾನಿ ಚುನಾವಣೆ ಸಂದರ್ಭದಲ್ಲಿ ಪದೇ ಪದೇ ಬರುತ್ತಿದ್ದಾರೆ. ರಾಜ್ಯದ ಜನರ ತೆರಿಗೆ ಹಣವನ್ನು ಬಿಜೆಪಿ ತನ್ನ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
‘ಎಲ್‌ಇಡಿ ಪರದೆ, ಸಿಸಿಟಿವಿ, ಸೌಂಡ್ ಸಿಸ್ಟಮ್‌ಗೆ ₹40ಲಕ್ಷ, ಜರ್ಮನ್ ಟೆಂಟ್, ವೇದಿಕೆ, ಪೆಂಡಾಲು, ಗ್ರೀನ್ ರೂಂ, ಬ್ಯಾರಿಕೇಡ್‌ಗಾಗಿ ₹4.68ಕೋಟಿ, ಊಟಕ್ಕಾಗಿ ₹86ಲಕ್ಷ, ಕಾರ್ಯಕ್ರಮದ ಪ್ರಚಾರಕ್ಕಾಗಿ ₹61ಲಕ್ಷ, ಕಾರ್ಯಕ್ರಮ ನಿರ್ವಹಣೆಗಾಗಿ ₹8.6ಲಕ್ಷ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 1500ಕ್ಕೂ ಹೆಚ್ಚು ಬಸ್ಸುಗಳಿಗಾಗಿ ₹2.83ಕೋಟಿ ಸೇರಿ ಒಟ್ಟು ₹9.49ಕೋಟಿ
ಖರ್ಚು ಮಾಡಲಾಗಿದೆ. ಇದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲಾಡಳಿತವೇ ನೀಡಿದೆ’ ಎಂದು ಹೇಳಿದರು.
‘ಈ ಅಧಿಕೃತ ಖರ್ಚನ್ನು ಹೊರತುಪಡಿಸಿ, ಇತರ ಮಾರ್ಗದಲ್ಲಿ ₹10 ಕೋಟಿಗೂ ಹೆಚ್ಚು ಖರ್ಚು ಮಾಡಿರುವ ಶಂಕೆ ಇದೆ. ಈ ಹಣದಲ್ಲಿ ಕನಿಷ್ಠ 200ರಿಂದ 300 ಬಡವರಿಗೆ ಮನೆ ನಿರ್ಮಿಸಿ ಕೊಡಬಹುದಿತ್ತು. ಆದರೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಜನರ ಹಣವನ್ನು ಪೋಲು ಮಾಡುತ್ತಿರುವುದನ್ನು ರಾಜ್ಯದ ಜನತೆ ಸಹಿಸುವುದಿಲ್ಲ. ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಾದರೆ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡುವುದಾದರೂ ಏಕೆ’ ಎಂದು ಪ್ರಶ್ನಿಸಿದರು.