
ಗೋಕಾಕ- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಜನ ಮತ್ತು ತೆರಿಗೆ ಸ್ನೇಹಿ ಆಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಬಜೆಟ್ ಸಂಬಂಧಿಸಿದಂತೆ ಮಾಧ್ಯಮಗಳಿಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿ, ಹೊಸ ರೈಲ್ವೆ ಯೋಜನೆಗಳ ಘೋಷಣೆ, ಹೈದರಾಬಾದ್ ಬೆಂಗಳೂರು ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದ 100 ಆಯ್ದ ನಗರಗಳಲ್ಲಿ ಫುಡ್ ಸ್ಟ್ರೀಟ್ ನಿರ್ಮಾಣ, ಪಿಎಂ ಸೂರ್ಯ ಘರ್ ಬಿಜಲಿ ಯೋಜನೆ, ದೇಶದ 12 ಕಡೆ ಕೈಗಾರಿಕೆ ಪಾರ್ಕ್ಗಳ ನಿರ್ಮಾಣದಿಂದ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡಿರುವುದು, ದೇಶದ ಬೆನ್ನೆಲುಬಾದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕೃಷಿ ವಲಯದಲ್ಲಿ ಹೂಡಿಕೆಗೆ ಉತ್ತೇಜನ ನೀಡಿರುವುದು, ರೈತರನ್ನು ನೈಸರ್ಗಿಕ ಕೃಷಿಯ ಕಡೆಗೆ ಸೆಳೆಯುವುದರೊಂದಿಗೆ ಈ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದರತ್ತ ಗಮನ ಹರಿಸಲಾಗಿದೆ. ಕೃಷಿ ಉತ್ಪಾದಕತೆ ಹೆಚ್ಚಳ ಮತ್ತು ಹವಾಮಾನ ಆಧಾರಿತ ಬೆಳೆಗಳ ಅಭಿವೃದ್ಧಿಯ ಸಲುವಾಗಿ ಕೇಂದ್ರ ಸರ್ಕಾರ ಕೃಷಿ ಸಂಶೋಧನೆ ನಡೆಸಿ ಅದನ್ನು ಪರಿಣಾಮಕಾರಿಯಾಗಿ ಅಳವಡಿಸಲು ಯೋಜನೆ ಹಮ್ಮಿಕೊಂಡಿದೆ. ಇಂತಹ ಹತ್ತು ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರವು ತನ್ನ ಬಜೆಟ್ನಲ್ಲಿ ಪ್ರಕಟಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ರೈತರಪರ, ಜನರ ಪರವಾಗಿದ್ದಾರಲ್ಲದೇ ಜನರ ಆರ್ಥಿಕ ಸುಧಾರಣೆಗೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದು ನಿರೂಪಿತವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
Ad9 News Latest News In Kannada