ಬೆಂಗಳೂರು: ರಾಜ್ಯದಲ್ಲಿ ಮನೆಮನೆಗೆ ಪೊಲೀಸ್ ಎಂಬ ನೂತನ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾದ ಸಂದರ್ಭದಲ್ಲಿ ಪೊಲೀಸರಿಗೆ ಕರೆ ಮಾಡಿ ತಿಳಿಸಬಹುದು. ಪೊಲೀಸರೇ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಆಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಶಾಲಾ, ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಬೇಕು. ಪೋಷಕರ ಸಭೆಗಳಲ್ಲಿಯೂ ಭಾಗವಹಿಸಬೇಕು ಎಂದು ಸಚಿವ ಪರಮೇಶ್ವರ್ ಸೂಚನೆ ನೀಡಿದ್ದು, ಮಂಡ್ಯದ ಮದ್ದೂರಿನಲ್ಲಿ ಮಗು ಸಾವಿಗೀಡಾದ ಘಟನೆಯಿಂದ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ. ಸಾರ್ವಜನಿಕ ವಲಯದಲ್ಲಿ ಇಂತಹ ಘಟನೆಗಳು ನಡೆಯಬಾರದು. ಇದಕ್ಕೆ ಕಾರಣರಾದ ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಶಿಸ್ತುಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದ ಸಂಚಾರವನ್ನು ಮೇಲ್ವಿಚಾರಣೆ ಮಾಡಿದ್ದೇನೆ. ಸಂಚಾರ ಸಮಸ್ಯೆ ಹೆಚ್ಚುತ್ತಿದೆ. ಮಳೆ ಬಂದರೆ ಸಂಚಾರ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ, ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಸಮನ್ವಯ ಸಾಧಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು. ನಾವು ಶಾಶ್ವತ ಪರಿಹಾರವನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.