Breaking News
Home / Uncategorized / ಕಾಂಗ್ರೆಸ್ಸಿಗೆ ಕೈ ಕೊಟ್ಟ ಮತದಾರ, ಗ್ಯಾರಂಟಿ ಯೋಜನೆಗೆ ಸರಕಾರದಿಂದ ಬ್ರೇಕ್- ಜಗದೀಶ ಶೆಟ್ಟರ್

ಕಾಂಗ್ರೆಸ್ಸಿಗೆ ಕೈ ಕೊಟ್ಟ ಮತದಾರ, ಗ್ಯಾರಂಟಿ ಯೋಜನೆಗೆ ಸರಕಾರದಿಂದ ಬ್ರೇಕ್- ಜಗದೀಶ ಶೆಟ್ಟರ್

Spread the love

*ನಾಗನೂರ ಪಟ್ಟಣದಲ್ಲಿ ನೂತನ ಸಂಸದರಿಗೆ ಅಭಿನಂದನೆ*

ಮೂಡಲಗಿ: ಮತದಾರರ ಮುಂದೆ ಕಾಂಗ್ರೇಸಿನವರು ಒಡ್ಡಿದ ಹಣಬಲ, ತೋಳಬಲ, ಆಸೆ-ಆಮಿಷಗಳ ಆಟ ನಡೆಯಲಿಲ್ಲ. ಜೊತೆಗೆ ಕಾಂಗ್ರೇಸ್ಸಿನ ಗ್ಯಾರಂಟಿ ಯೋಜನೆಗಳ ಫಲ ನೀಡಲಿಲ್ಲ. ಗೆಲುವಿಗೆ ಎಲ್ಲ ರೀತಿಯ ಶತ ಪ್ರಯತ್ನಗಳನ್ನು ಮಾಡಿದರೂ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವಕ್ಕೆ ಮತದಾರ ಪ್ರಭುಗಳು ಬಿಜೆಪಿಗೆ ಆಶೀರ್ವಾದ ಮಾಡಿ ನನ್ನ ಸೇವೆಗೆ ಅವಕಾಶ ಕೊಟ್ಟಿದ್ದಾರೆಂದು ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಗುರುವಾರದಂದು ಸಂಜೆ ತಾಲೂಕಿನ ನಾಗನೂರ ಪಟ್ಟಣದ ಭಗೀರಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ನೂತನ ಸಂಸದರ ಅಭಿನಂದನೆ ಹಾಗೂ ಕಾರ್ಯಕರ್ತರ ಕೃತಜ್ಞತಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು 1.79 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಆಶೀರ್ವದಿಸಿದ ಮತದಾರರನ್ನು ಅಭಿನಂದಿಸಿದರು.


ನಮ್ಮ ವಿರೋಧಿ ಅಭ್ಯರ್ಥಿಗಳ ಪರವಾಗಿ ಜಿಲ್ಲೆಯ ಮತದಾರರಿಗೆ ಇನ್ನಿಲ್ಲದ ಆಮಿಷಗಳನ್ನು ಒಡ್ಡಿದರು. ನಮ್ಮ ವಿರುದ್ಧ ಸಾಕಷ್ಟು ಅಪಪ್ರಚಾರಗಳನ್ನು ಮಾಡಿದರು. ನಮಗೆ ಬೇಕಾಗಿರುವುದು ದೇಶದ ಸುರಕ್ಷತೆ. ಈ ನಿಟ್ಟಿನಲ್ಲಿ ನಾವು ಮೋದಿಯವರು ಮತ್ತೋಮ್ಮೆ ಪ್ರಧಾನಿಯಾಗಬೇಕೆಂಬ ಸಂಕಲ್ಪದಿಂದ ಮತದಾರರ ಬಳಿ ಮತಯಾಚಿಸಿದ್ದೇವೆ. ಆದರೆ ವಿರೋಧಿಗಳು ಕೇವಲ ನನ್ನನ್ನೇ ಕೇಂದ್ರಿಕರಿಸಿ ವ್ಯೆಯಕ್ತಿಕ ಟೀಕೆ-ಟಿಪ್ಪಣಿಗಳನ್ನು ಮಾಡಿದರು. ಅವರ ದುಡ್ಡಿನ ದರ್ಪಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಸ್ವತ: ಅವರ ಕ್ಷೇತ್ರದಲ್ಲಿಯೇ ನನಗೆ 50 ಸಾವಿರ ಮತಗಳ ಮುನ್ನಡೆಯನ್ನು ನೀಡಿದ್ದಾರೆ. ಇದರಿಂದಲೇ ಅವರ ಆಡಳಿತ ವೈಖರಿಗೆ ಜನ ಬೇಸತ್ತಿರುವುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ತಮ್ಮ ಕೈ ಹಿಡಿಯಲಿವೆ ಎಂದು ಕಾಂಗ್ರೆಸ್ ಮುಖಂಡರು ನಂಬಿದ್ದರು. ಪ್ರಬುದ್ಧ ಮತದಾರರು ತಿರಸ್ಕರಿಸಿದರು. ಚುನಾವಣೆಯಲ್ಲಿ ಸೋತು ಸುಣ್ಣಾಗಿರುವ ಕಾಂಗ್ರೇಸ್ ಪಕ್ಷವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವದಿಲ್ಲ. ಗ್ಯಾರಂಟಿ ಕೈಕೊಟ್ಟಿದ್ದರಿಂದ ಈ ಯೋಜನೆಯನ್ನು ನಿಲ್ಲಿಸುವಂತೆ ಸ್ವತ: ಕಾಂಗ್ರೇಸ್ ಶಾಸಕರೇ ಹೇಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಹೇಳಿದರು.


ಜಿಲ್ಲೆಯಾದ್ಯಂತ ಬಿಜೆಪಿಗೆ ಸವದತ್ತಿ ಹೊರತು ಪಡಿಸಿ ಎಲ್ಲ ಕಡೆಗಳಲ್ಲೂ ಮುನ್ನಡೆ ಮತಗಳನ್ನು ಮತದಾರರು ನೀಡಿದ್ದಾರೆ. 30 ವರ್ಷಗಳ ರಾಜಕೀಯ ಅನುಭವ ನನಗಿದೆ. ಪಕ್ಷದ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಸಚಿವ, ಸ್ಪಿಕರ್, ಮುಖ್ಯಮಂತ್ರಿ, ವಿಧಾನ ಪರಿಷತ್ತ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿ ಮಾಡುತ್ತೇನೆ. ಈ ಮೂಲಕ ಬೆಳಗಾವಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಜಗದೀಶ ಶೆಟ್ಟರ್ ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಕಳೆದ 32 ವರ್ಷಗಳಿಂದ ನಮ್ಮ ಸಂಘಟನೆಯನ್ನು ಬಲವರ್ಧನೆ ಮಾಡಲಾಗಿದೆ. ಸಾಮಾಜಿಕ, ಶೈಕ್ಷಣಿಕ, ಸಹಕಾರ, ಧಾರ್ಮಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ನಮ್ಮ ಸಂಘಟನೆಯ ಕಾರ್ಯಕರ್ತರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಹಿರಿಯರು ದುಡಿದಿದ್ದಾರೆ. ಮುಂದೆಯೂ ಕೂಡಾ ನಮ್ಮ ಸಂಘಟನೆಗೆ ಅನುಕೂಲವಾಗುವಂತೆ ಕಾರ್ಯಕರ್ತರು ನಮ್ಮೊಂದಿಗೆ ಕೈ ಜೋಡಿಸಬೇಕು. ಎಲ್ಲ ಸಮಾಜಗಳ ಬಾಂಧವರು ಅಣ್ಣ-ತಮ್ಮಂದಿರಂತೆ ಬಾಳಬೇಕು. ಸರ್ವ ಸಮಾಜಗಳ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನದಿಂದ ಅರಭಾವಿಮಠದಿಂದ ಲೋಕಾಪೂರ ವರೆಗೆ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿಗೆ ನೂತನ ಸಂಸದರು ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಪ್ರಯತ್ನಿಸಬೇಕು. ಅರಭಾವಿ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಆರಂಭಿಸಲು ಜಗದೀಶ ಶೆಟ್ಟರ್ ಅವರು ಕೇಂದ್ರ ಮಟ್ಟದಲ್ಲಿ ಒತ್ತಾಯ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂಸದರಲ್ಲಿ ಕೋರಿದರು.
ದಾಖಲೆ ಮತಗಳ ಅಂತರದಿಂದ ವಿಜಯಶಾಲಿಯಾಗಿರುವ ಜಗದೀಶ ಶೆಟ್ಟರ್ ಹಾಗೂ ಗೆಲುವಿಗೆ ಕಾರಣಿಕರ್ತರಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅರಭಾವಿ ಬಿಜೆಪಿ ಮಂಡಲದಿಂದ ಸತ್ಕರಿಸಿ ಗೌರವಿಸಲಾಯಿತು.
ಹಿರಿಯ ಸಹಕಾರಿ ಬಿ.ಆರ್.ಪಾಟೀಲ(ನಾಗನೂರ), ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರು ಬೆಳಗಲಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ, ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಸ್ವಾಗತಿಸಿದರು. ಬಸವರಾಜ ಮಾಳೇದವರ ನಿರೂಪಿಸಿದರು. ಮಹಾಂತೇಶ ಕುಡಚಿ ವಂದಿಸಿದರು.


Spread the love

About Ad9 Haberleri

Check Also

ಮೂಡಲಗಿ: ಐದು ಸೇತುವೇಗಳು ಜಲಾವೃತ್ತ ಸಂಚಾರ ಅಸ್ಥವ್ಯಸ್ಥ

Spread the love ಮೂಡಲಗಿ: ಹಿರಣ್ಯಕೇಶ ನದಿಯಿಂದ ಘಟಪ್ರಭಾ ನದಿಗೆ ಸುಮಾರು 16 ಸಾವಿರ ಕ್ಯೂಸೇಕ್ಸ್ ನೀರು ಹರಿದು ಬರುತ್ತಿರುವ …

Leave a Reply

Your email address will not be published. Required fields are marked *