Breaking News

ಕನ್‍ಪ್ಯೂಸ್ ಮಾಡ್ಕೋಬೇಡಿ. ತಪ್ಪು ದಾರಿ ಹಿಡಿಬೇಡಿ. ಮಂಗಳಾ ಅಂಗಡಿ ಬೆಂಬಲಿಸಿ-ಕಮಲ ಅರಳಿಸಿ

Spread the love


ಗೋಕಾಕ: ಕುಟುಂಬವೇ ಬೇರೆ. ರಾಜಕಾರಣವೇ ಬೇರೆ. ಕಾರ್ಯಕರ್ತರು ಏ-17 ರಂದು ನಡೆಯುವ ಈ ಉಪಚುನಾವಣೆಯಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೇ ದೇಶದ ಸಮಗ್ರತೆ, ಸುರಕ್ಷತೆ ಹಾಗೂ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕೆನ್ನುವ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಊಹಾ-ಪೋಹಗಳಿಗೆ ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೆರೆ ಎಳೆದರು.
ಸೋಮವಾರದಂದು ಸಂಜೆ ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಅರಭಾವಿ ವಿಧಾನಸಭಾ ಮತಕ್ಷೇತ್ರದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಮತ್ತು ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗೆ ತಮ್ಮ ಮತ ನೀಡಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕೈ ಜೋಡಿಸುವಂತೆ ಅವರು ಕೋರಿದರು.
ಕೆಲವೊಂದು ಕಾರ್ಯದ ಒತ್ತಡದಿಂದ ಕ್ಷೇತ್ರಕ್ಕೆ ಬರಲು ಆಗಲಿಲ್ಲ. ನನ್ನ ಅನುಪಸ್ಥಿತಿಯಲ್ಲಿಯೂ ಸಹ ನಮ್ಮೆಲ್ಲ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದು ಇದಕ್ಕೆ ನಮ್ಮ ಟೀಂ ಎನ್‍ಎಸ್‍ಎಫ್ ಸಾಥ ನೀಡಿದೆ. ಬಿಜೆಪಿ ನಾಯಕರುಗಳೊಂದಿಗೆ ದಿನನಿತ್ಯ ಸಂಪರ್ಕಿದಲ್ಲಿದ್ದು, ಚುನಾವಣೆಯ ಪ್ರಚಾರ ಕಾರ್ಯದ ಬಗ್ಗೆ ಚರ್ಚಿಸುತ್ತಿದ್ದೆ. ನನ್ನ ಮೇಲೆ ಅಭಿಮಾನವಿರುವ ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ. ನನ್ನ ಅನುಪಸ್ಥಿತಿಯಲ್ಲಿ ಸಹ ನಾವು ಸೂಚಿಸಿದ ರೀತಿಯಲ್ಲಿಯೇ ಕೆಲಸ ಮಾಡುತ್ತಾರೆ. ನೀವು ಹೆದರಬೇಡಿ. ಕಳೆದ ಚುನಾವಣೆಗಿಂತ ಈ ಬಾರಿ ಅತ್ಯಧಿಕ ಮತಗಳ ಮುನ್ನಡೆ ದೊರಕಿಸಿಕೊಡುವ ಜವಾಬ್ದಾರಿ ನನ್ನದು ಎಂದು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಆದ್ದರಿಂದ ಈ ಚುನಾವಣೆಯಲ್ಲಿ ಕುಟುಂಬಕ್ಕಿಂತ ನಮಗೆ ಪಕ್ಷ ಮುಖ್ಯ. ಕಾಂಗ್ರೇಸ್ ಪಕ್ಷವನ್ನು ವಿರೋಧಿಸುತ್ತಾ ಬಂದಿರುವ ನಮಗೆ ಮಂಗಳಾ ಅಂಗಡಿ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿಕೊಡುತ್ತೇವೆಂದು ಹೇಳಿದರು.
ಈ ಸಂದೇಶವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮತದಾರರಿಗೆ ಮುಟ್ಟಿಸಬೇಕು. ಯಾವುದೇ ಕಾರಣಕ್ಕೂ ತಪ್ಪು ಗ್ರಹಿಕೆಗೆ ಅವಕಾಶ ಮಾಡಿಕೊಡಬೇಡಿ. ಅಲ್ಲದೇ ಯಾರು ದಾರಿ ತಪ್ಪಬೇಡಿ, ಪ್ರಧಾನಿ ಮೋದಿ ಮತ್ತು ಸಿ.ಎಮ್. ಯಡಿಯೂರಪ್ಪನವರ ಕೈ ಬಲಪಡಿಸಲು ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅವರು ಮನವಿ ಮಾಡಿಕೊಂಡರು.
ನಾಳೆಯಿಂದಲೇ ಅರಭಾವಿ ಮತಕ್ಷೇತ್ರಾದಧ್ಯಂತ ಮಂಗಳಾ ಅಂಗಡಿ ಪರ ಪ್ರಚಾರ ಕೈಗೊಳ್ಳುತ್ತೇನೆ. ಈ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯುತ್ತಿದ್ದೇನೆ. ನಮ್ಮ ಪಕ್ಷದ ವರಿಷ್ಠರು ವಿಶ್ವಾಸವನ್ನಿಟ್ಟುಕೊಂಡಿದ್ದು, ಅದನ್ನು ಚಾಚು ತಪ್ಪದೇ ಅಂಗಡಿ ಪರ ಮತಯಾಚಿಸುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೃಷ್ಟಪಡಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಈ ಚುನಾವಣೆಯ ನಂತರ ಕಾಂಗ್ರೇಸ್ ಪಕ್ಷ ಇಬ್ಬಾಗವಾಗಲಿದ್ದು, ಪಕ್ಷವನ್ನು ಹುಡುಕಬೇಕಾದ ಗಂಭೀರ ಪರಿಸ್ಥಿತಿ ಅದಕ್ಕೆ ಒದಗಿಬರಲಿದೆ. ಇದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೇಸ್ ಪಕ್ಷದ ಸ್ಥಿತಿಯಂತೂ ಹೀನಾಯವಾಗಿದೆ. ಹೇಳುವವರು, ಕೇಳುವವರು ಯಾರೂ ಇಲ್ಲಾ. ಅದಕ್ಕೆ ಒಂದುವರೆ ವರ್ಷದಿಂದ ಈಗಲೂ ಟೆಂಪರವರಿ ಅಧ್ಯಕ್ಷರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಕೂಗಾಡಿದ್ದ ಜಿ-23 ನಾಯಕರನ್ನು ಪಕ್ಷ ಹೊರಗಿಟ್ಟಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳ, ಆಸ್ಸಾಮ್, ಮತ್ತು ಪುದುಚೇರಿಯಲ್ಲಿ ಅಧಿಕಾರಕ್ಕೆ ಬರಲಿದೆ. ತಮಿಳುನಾಡಿನಲ್ಲಿ ಮಿತ್ರ ಪಕ್ಷ ಎಐಎಡಿಎಮ್‍ಕೆ ಅಧಿಕಾರಕ್ಕೆ ಬರಲಿದ್ದು, ಕೇರಳದಲ್ಲಿ ಬಿಜೆಪಿ ಉತ್ತಮ ಪಲಿತಾಂಶವನ್ನು ನೀಡಲಿದೆ. ಮಂಗಳಾ ಅಂಗಡಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಮೋದಿ ಅವರ ಮಹಾನ್ ಪರಿವರ್ತನಾ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಸಚಿವ ಉಮೇಶ ಕತ್ತಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಸುಭಾಶ ಪಾಟೀಲ, ಮುಖಂಡರಾದ ಬಸನಗೌಡ ಪಾಟೀಲ, ರಾವಸಾಬ ಪಾಟೀಲ, ಹಣಮಂತ ತೇರದಾಳ, ವಿಠ್ಠಲ ಸವದತ್ತಿ, ರಾಮಣ್ಣ ಮಹಾರೆಡ್ಡಿ, ಶಂಕರ ಬಿಲಕುಂದಿ, ಬಸವಂತ ಕಮತಿ, ಕೆಂಚಗೌಡ ಪಾಟೀಲ, ಎಮ್.ಕೆ.ಕುಳ್ಳೂರ, ರವಿ ಪರುಶೆಟ್ಟಿ, ಲಕ್ಷ್ಮಣ ಗಣಪ್ಪಗೋಳ, ಲಕ್ಷ್ಮಣ ಮುಸಗುಪ್ಪಿ, ಪರಮೇಶ್ವರ ಹೊಸಮನಿ, ಸಿದ್ದಲಿಂಗ ಕಂಬಳಿ, ಶಿವನಗೌಡ ಪಾಟೀಲ, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …