ಗೋಕಾಕ: ಕೊರೋನಾ ಒಂದು ಮತ್ತು ಎರಡನೇ ಅಲೆಯು ಮಾನವ ಸಂಕುಲನಕ್ಕೆ ಮಹಾಮಾರಿಯಾಗಿ ಕಾಡುತ್ತಿದ್ದು, ದೇವರ ದಯೆಯಿಂದ ಮೂರನೇ ಅಲೆ ಬರಬಾರದು. ಒಂದು ವೇಳೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲಿಕ್ಕೆ ಎಲ್ಲರೂ ಸನ್ನದ್ಧರಾಗಬೇಕು. ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯನ್ನು ಕೋವಿಡ್‍ಗೆ ವೆಚ್ಚ ಮಾಡಲಾಗುವುದೆಂದು ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಡಿಯಲ್ಲಿ ಮೂಡಲಗಿ ತಾಲೂಕಿನ ಎಲ್ಲ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸಟೆಂಟರ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಜನರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಮ್ಮ ಶಾಸಕರ ನಿಧಿಯನ್ನು ಕೋವಿಡ್ ನಿಯಂತ್ರಣಕ್ಕಾಗಿ ಸದ್ಬಳಕೆ ಮಾಡಿಕೊಳ್ಳಲಾಗುವುದು. ನಮಗೆ ಜನರ ಆರೋಗ್ಯ ಮುಖ್ಯವಾಗಿದೆ. ಅವರ ಸುರಕ್ಷತೆಗಾಗಿ ಹಲವು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಬಹುತೇಕ ಸೊಂಕಿತರು ಆಕ್ಸಿಜನ್ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿದ್ದು, ಅಂತವರಿಗೆ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯುತ್ತ ಚಾಲಿತ ಆಕ್ಸಿಜನ್ ನೀಡಲಾಗಿದ್ದು, ಇದರಿಂದ ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ದಾಖಲಾಗುವ ರೋಗಿಗಳಿಗೆ ಸಂಜೀವಿನಿಯಾಗಲಿದೆ ಎಂದು ಅವರು ಹೇಳಿದರು.
ಈಗಾಗಲೇ ಮೂಡಲಗಿ ಮತ್ತು ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರಕ್ಷಾಕವಚ (ಅಂಬ್ಯುಲೆನ್ಸ್) ವಾಹನಗಳನ್ನು ನೀಡಲಾಗಿದೆ. ಇನ್ನೂ 9 ಹೊಸ ರಕ್ಷಾಕವಚ ವಾಹನಗಳನ್ನು ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೀಘ್ರದಲ್ಲಿಯೇ ನೀಡಲಾಗುವುದು. ಹೊಸ 9ರಲ್ಲಿ 7 ವಾಹನಗಳನ್ನು ತಾವೇ ತಮ್ಮ ನಿಧಿಯಿಂದ ನೀಡಿದ್ದು, ಇದರಲ್ಲಿ ಉಳಿದ ಎರಡು ವಾಹನಗಳನ್ನು ಸಂಸದ ಈರಪ್ಪ ಕಡಾಡಿ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ನೀಡಲಿದ್ದಾರೆ. ಇದರಿಂದ ಅರಭಾವಿ ಮತಕ್ಷೇತ್ರದಲ್ಲಿ ಒಟ್ಟು 11 ರಕ್ಷಾಕವಚ ವಾಹನಗಳು ಸಾರ್ವಜನಿಕರ ಸೇವೆಗೆ ಅನುಕೂಲವಾಗಲಿವೆ ಎಂದು ತಿಳಿಸಿದರು.
ಅರಭಾವಿ ಮತಕ್ಷೇತ್ರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಅಗತ್ಯವಿರುವ ಎಲ್ಲ ಲಸಿಕೆಗಳು ಈಗಾಗಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರನ್ನು ಆಸ್ಪತ್ರೆಗಳಿಗೆ ಕರೆ ತಂದು ಲಸಿಕೆ ಹಾಕಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲು ಆಯಾ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಮುಂದಾಳತ್ವದಲ್ಲಿ ಇನ್ನೂಳಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಕೈ ಜೋಡಿಸಲಿದ್ದಾರೆ. ಅಭಿಯಾನದ ಜಾಗೃತಿಗಾಗಿ ಟೀಂ ಎನ್‍ಎಸ್‍ಎಫ್ ಸಾಥ್ ನೀಡಲಿದೆ. ಪ್ರತಿ ಗ್ರಾಮಗಳಲ್ಲಿ ಲಸಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಯಶಸ್ವಿಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೊಂಕಿತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಮೂಲಕ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ಗೋಕಾಕ, ಮಲ್ಲಾಪೂರ ಪಿ.ಜಿ. ಮತ್ತು ಮೂಡಲಗಿಯಲ್ಲಿ ಕೋರೋನಾ ಕಾಳಜಿ ಕೇಂದ್ರಗಳನ್ನು ತೆರೆದು ಸೊಂಕಿತರ ಸುರಕ್ಷತೆಗಾಗಿ ಆಕ್ಸಿಜನ್ ಸೌಲಭ್ಯ, ಮೆಡಿಕಲ್ ಕಿಟ್‍ಗಳನ್ನು ವಿತರಿಸಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಂಬ್ಯುಲೆನ್ಸ್‍ಗಳನ್ನು ನೀಡಿ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಗೋಕಾಕ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲದಾರ ಡಿ.ಜೆ.ಮಹಾತ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಬೆನವಾಡಕರ, ಹಿರಿಯ ತಜ್ಞ ವೈದ್ಯ ಡಾ. ಆರ್.ಎಸ್.ಬೆಣಚಿನಮರಡಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಎಮ್.ಎಸ್.ಕೊಪ್ಪದ, ಗೋಕಾಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್, ಮೂಡಲಗಿ ಬಿಇಓ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಸಿಡಿಪಿಓ ವಾಯ್.ಎಮ್.ಗುಜನಟ್ಟಿ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಕೋಣ , ಪಿಎಚ್‍ಸಿ ಎಲ್ಲ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
Home / ಗೋಕಾಕ / ಕೋವಿಡ್ ನಿಯಂತ್ರಣಕ್ಕೆ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿ ಸಂಪೂರ್ಣ ಬಳಕೆ-ಶಾಸಕ ಬಾಲಚಂದ್ರ ಜಾರಕಿಹೊಳಿ.
Check Also
ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ
Spread the love ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ …