ಬೆಂಗಳೂರು: ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಸೋಮವಾರದಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಮೇ 24ರ ತನಕ ಲಾಕ್‌ಡೌನ್ ಜಾರಿಯಲ್ಲಿರಲಿದೆ.
ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಸಂಚಾರ ನಡೆಸುವ ಜನರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಲಾಕ್‌ಡೌನ್ ಲಾಠಿ ಹಿಡಿದ ಪೊಲೀಸರ ವಿರುದ್ಧ ಆಕ್ರೋಶ
ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪೊಲೀಸರಿಗೆ ಸೂಚನೆಯೊಂದನ್ನು ನೀಡಿದ್ದಾರೆ.
ಅನಗತ್ಯವಾಗಿ ಬಲ ಪ್ರಯೋಗ ಮಾಡದಂತೆ ನಿರ್ದೇಶನ ಕೊಟ್ಟಿದ್ದಾರೆ.
ಲಾಕ್ ಡೌನ್: ಜನರ ಮೇಲೆ ಲಾಠಿ ದರ್ಪ ತೋರಿದರೆ ಪೊಲೀಸರಿಗೆ ತೊಂದರೆ
ಒಂದು ವೇಳೆ ಸಾರ್ವಜನಿಕರು ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಪೊಲೀಸ್ ಸಿಬ್ಭಂದಿ ಕ್ರಮಕೈಗೊಳ್ಳಬೇಕು ಹೊರತು ಯಾವುದೇ ಬಲ ಪ್ರಯೋಗ ಮಾಡಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಕಮಲ್ ಪಂತ್ ಟ್ವೀಟ್ ಮಾಡಿದ್ದಾರೆ.
ಒಟ್ಟು ಎರಡು ಟ್ವೀಟ್ ಮಾಡಿರುವ ಆಯುಕ್ತರು ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಒಪ್ಪಿಗೆ ನೀಡಲಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂಚಾರ ಅವಶ್ಯವಿದ್ದಲ್ಲಿ ಅದರ ಕುರಿತಂತೆ ಮಾಹಿತಿಗಾಗಿ ಕರೆ ಮಾಡಬಹುದು ಎಂದು ನಂಬರ್ ವೊಂದನ್ನು ಹಾಕಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ಸಂಚಾರ ನಡೆಸುವ ಜನರ ಮೇಲೆ ನಿರ್ದಯವಾಗಿ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಪೊಲೀಸರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೂಚನೆ ಕೊಡಲಾಗಿದೆ.