Breaking News

ಅರಭಾವಿ, ಕಲ್ಲೋಳಿ, ನಾಗನೂರ, ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿಗಾಗಿ 143 ಕೋಟಿ ರೂ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

*ಮೂಡಲಗಿ* : ಅರಭಾವಿ, ಕಲ್ಲೋಳಿ, ನಾಗನೂರ ಮತ್ತು ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ 143 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಪಟ್ಟಣ ಪಂಚಾಯತಿ ಹಾಗೂ ಸಾರ್ವಜನಿಕರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಮೃತ-2 ಯೋಜನೆಯಡಿ ಈ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣಗಳಿಗೆ ತಲಾ 2000 ಮತ್ತು ಮೂಡಲಗಿ ಪುರಸಭೆ ವ್ಯಾಪ್ತಿಯ 5800 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ತಲುಪಲಿದ್ದು, ಸಾರ್ವಜನಿಕರ ಮನೆ-ಮನೆಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ದಿನದ 24 ತಾಸು ನೀರು ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂದು ತಿಳಿಸಿದರು.
ಧುಪದಾಳ ಹತ್ತಿರ ಶುದ್ಧ ಕುಡಿಯುವ ನೀರಿಗಾಗಿ ಓ.ಹೆಚ್.ಟಿ ನಿರ್ಮಾಣವಾಗಲಿದ್ದು, ಅಲ್ಲಿಂದ ಈ ಪಟ್ಟಣಗಳಿಗೆ ಪೈಪಲೈನ್ ಮೂಲಕ ನೀರು ಸರಬರಾಜು ಆಗಲಿದೆ. ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದು ನಮ್ಮ ಬಿಜೆಪಿ ಸರ್ಕಾರದಿಂದ ಮಂಜೂರಾದ ಕಾಮಗಾರಿಯಾಗಿದೆ ಎಂದು ಹೇಳಿದರು.
ಕಲ್ಲೋಳಿ ಪಟ್ಟಣದ ಅಭಿವೃದ್ಧಿಗೆ ನಮ್ಮ ಸರ್ಕಾರವಿದ್ದಾಗ ಸಾಕಷ್ಟು ಯೋಜನೆಗಳನ್ನು ನೀಡಲಾಗಿತ್ತು. ಆದರೀಗ ನಮ್ಮ ಪಕ್ಷ ವಿರೋಧ ಪಕ್ಷದಲ್ಲಿ ಕುಳಿತಿರುವುದರಿಂದ ನಿರೀಕ್ಷಿಸಿದಷ್ಟು ಹೆಚ್ಚಿನ ಅನುದಾನ ಸಾಧ್ಯವಿಲ್ಲ. ಆದರೂ ಸಹ ಚುನಾವಣೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಕೆಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಕಲ್ಲೋಳಿ ಪಟ್ಟಣ ಪಂಚಾಯತಿ ಎದುರು ನಿರ್ಮಿಸಲಾಗಿರುವ ಶೂರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಸಮಾರಂಭವನ್ನು ಇಷ್ಟರಲ್ಲಿಯೇ ಅದ್ಧೂರಿಯಾಗಿ ಉದ್ಘಾಟಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಬಾಲಚಂದ್ರ ಜಾರಕಿಹೊಳಿ ಅವರನ್ನು ಕಲ್ಲೋಳಿ ಪಟ್ಟಣದ ಸಾರ್ವಜನಿಕರು, ಆಯಾ ಸಮಾಜಗಳ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪರಪ್ಪ ಕಡಾಡಿ, ಬಸವಂತ ದಾಸನವರ, ನೀಲಕಂಠ ಕಪ್ಪಲಗುದ್ದಿ, ಸುಭಾಸ ಕುರಬೇಟ, ವಸಂತ ತಹಶೀಲ್ದಾರ, ಮಹಾಂತೇಶ ಕಪ್ಪಲಗುದ್ದಿ, ಮಲ್ಲಪ್ಪ ಹೆಬ್ಬಾಳ, ಉಮೇಶ ಬೂದಿಹಾಳ, ಬಸು ಯಾದಗೂಡ, ದತ್ತು ಕಲಾಲ, ಭೀಮಶಿ ಗೋರೋಶಿ, ಮಹಾದೇವ ಮದಭಾವಿ, ಅಶೋಕ ಮಕ್ಕಳಗೇರಿ, ಭಗವಂತ ಪತ್ತಾರ, ಬಸು ಜಗದಾಳ, ರಾಮಪ್ಪ ಹಡಗಿನಾಳ, ಬಸು ಸೊಂಟನವರ, ಹನಮಂತ ನಂದಿ, ಬಾಬು ಮೇತ್ರಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ದೇವಮಾನೆ ಹಾಗೂ ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About Ad9 News

Check Also

ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ವೇಳೆ ಗೈರಾದ ಅಧಿಕಾರಿಗಳು

Spread the love ಮೂಡಲಗಿ : ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ, ತಾಲೂಕು ಆಡಳಿತ, ತಾಲೂಕ ಪಂಚಾಯತ ಮೂಡಲಗಿ ಹಾಗೂ …

Leave a Reply

Your email address will not be published. Required fields are marked *