Breaking News
Home / ಮೂಡಲಗಿ / ನೆರೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ

ನೆರೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

 

ಗೋಕಾಕ್- 2019ಮತ್ತು 2021ನೇ ಸಾಲಿನ ನೆರೆ ಸಂತ್ರಸ್ತರ ಕೆಲವು ಮನೆಗಳು ಬ್ಲಾಕ್ ಆಗುತ್ತಿದ್ದು, ಅಂತಹ ಮನೆಗಳ ಬ್ಲಾಕ್ ತೆರವುಗೊಳಿಸಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಸಂಜೆ ತಾಲೂಕಿನ ಕೌಜಲಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ್ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಅಹವಾಲುಗಳಿಗೆ ಸ್ಪಂದಿಸಿ ತಕ್ಷಣವೇ ಪರಿಹಾರ ಮಾಡುವಂತೆ ಅವರು ಸೂಚಿಸಿದರು.
ಅಲ್ಲದೇ ನೆರೆ ಸಂತ್ರಸ್ತರ ಕೆಲವು ಫಲಾನುಭವಿಗಳ ಮನೆಗಳು ಅಡಿಟ್ ಆಗುತ್ತಿಲ್ಲ. ಸಂತ್ರಸ್ತರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಮಾಡಬೇಕು. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಸೂಚಿಸಿದ ಅವರು, ಕರ್ತವ್ಯದಲ್ಲಿ ಲೋಪ ಎಸಗುವ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಖಡಕ್ಕಾಗಿ ವಾರ್ನಿಂಗ್ ಮಾಡಿದರು.
ಬಸವ, ಅಂಬೇಡ್ಕರ್, ಪಿಎಂಎವಾಯ್ ಯೋಜನೆಯ ಅಡಿಯಲ್ಲಿ ಮಂಜೂರಾಗಿರುವ ಮನೆಗಳ ಬಿಲ್ ಗಳು ಕೆಲವೊಂದು ಕಾರಣಗಳಿಂದಾಗಿ ಬಾಕಿ ಉಳಿದಿದ್ದು, ತಕ್ಷಣವೇ ಫಲಾನುಭವಿಗಳ ಖಾತೆಗಳಿಗೆ ಬಿಲ್ಲನ್ನು ಜಮಾ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಅವರು, ಪುರಸಭೆ, ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬಡ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ವಿತರಿಸಬೇಕು. ಜೊತೆಗೆ ಚನ್ನದಾಸರ ಜನಾಂಗಕ್ಕೆ ಅಗತ್ಯವಿರುವ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ ರಸ್ತೆ ಕಾಮಗಾರಿಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು. ಪ್ರಗತಿ ಹಂತದಲ್ಲಿರುವ ಮತ್ತು ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಸ್ವತಃ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಉತ್ತಮ ಗುಣಮಟ್ಟದ ಕಾಮಗಾರುಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಮೆಳವಂಕಿ ರಸ್ತೆಯ ಸೇತುವೆಯ ಕಾಮಗಾರಿಯ ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.
ಸ್ಥಳೀಯ ಶಾಸಕರ ಮತ್ತು ಸಂಸದರ ನಿಧಿಯಲ್ಲಿ ಮಂಜೂರಾಗಿ ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್ಲನ್ನು ಕೂಡಲೇ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಗ್ರಾಮೀಣ ಭಾಗದ ಎಲ್ಲ ಸಾರಿಗೆಗಳನ್ನು ಓಡಿಸಲು ಸೂಚಿಸಿದರು. ರೈತ ಸಮುದಾಯಕ್ಕೆ ಅಗತ್ಯವಿರುವ ಬೀಜ ಮತ್ತು ಗೊಬ್ಬರವನ್ನು ಸಮರ್ಪಕವಾಗಿ ವಿತರಿಸಬೇಕು‌ ಎಂದು ಸೂಚಿಸಿದರು.
ಈಗಾಗಲೇ 11 ಜ್ಯೂನಿಯರ್ ಕಾಲೇಜುಗಳ ಅನುಮತಿಗಾಗಿ ಶಿಕ್ಷಣ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇದರಲ್ಲಿ ಐದು ಕಾಲೇಜುಗಳನ್ನು ಆರಂಭಿಸಲಿಕ್ಕೆ ಸರಕಾರ ಅನುಮತಿಯನ್ನು ನೀಡಿದರೆ ಸ್ವತಃ ತಾವೇ ತಮ್ಮ ಸ್ವಂತ ಅನುದಾನವನ್ನು ಕೊಟ್ಟು ವಿದ್ಯಾರ್ಥಿಗಳ ಕಾಲೇಜು ವ್ಯಾಸಂಗಕ್ಕಾಗಿ ಮೂಡಲಗಿ ವಲಯದಲ್ಲಿ ಕಾಲೇಜುಗಳನ್ನು ನಡೆಸಲಾಗುವುದು. ನಾವೇ ಅತಿಥಿ ಉಪನ್ಯಾಸಕರಿಗೆ ಆಕರ್ಷಕ ವೇತನವನ್ನು ನೀಡುತ್ತೇವೆ. ಸರಕಾರ ಅನುಮೋದನೆ ನೀಡಿದರೆ ಕಾಲೇಜು ನಡೆಸಲು ಸಿದ್ಧರಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೂಡಲಗಿ ತಹಶಿಲ್ದಾರ ಡಿ.ಜೆ. ಮಹಾತ್, ಗೋಕಾಕ್ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಗೋಕಾಕ್ ಡಿವೈಎಸ್ಪಿ ಮನೋಜ್ ಕುಮಾರ್ ನಾಯ್ಕ್, ಗೋಕಾಕ್ ಇಓ ಮುರಳೀಧರ ದೇಶಪಾಂಡೆ, ಮೂಡಲಗಿ ತಾ.ಪಂ.ಇಓ ಎಫ್.ಜಿ. ಚಿನ್ನನ್ನವರ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಸೇರಿದಂತೆ ಗೋಕಾಕ್ ಮತ್ತು ಮೂಡಲಗಿ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

*ಫೋಟೋ- ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೌಜಲಗಿಯಲ್ಲಿ ಶುಕ್ರವಾರ ಜರುಗಿದ ಮೂಡಲಗಿ ಮತ್ತು ಗೋಕಾಕ್ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು*


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …

Leave a Reply

Your email address will not be published. Required fields are marked *