ಮೂಡಲಗಿ : ವಿದ್ಯಾರ್ಥಿಗಳು ಸಮರ್ಪಕ ರೀತಿಯಲ್ಲಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕಾದರೆ ಸದೃಢ ಮನಸ್ಸಿನೊಂದಿಗೆ ಆರೋಗ್ಯಯುತ ಶರೀರದ ಅವಶ್ಯಕತೆ ಇದೆ ಎಂದು ಚಿಕ್ಕೋಡಿ ಜಿಲ್ಲಾ ಮದ್ಯಾಹ್ನ ಉಪಹಾರ ಯೋಜನೆ ನಿರ್ಧೇಶಕ ದೀಪಕ ಕುಲಕರ್ಣಿ ಹೇಳಿದರು.
ಅವರು ಸೋಮವಾರ ಪಟ್ಟಣದಲ್ಲಿ ಜರುಗಿದ ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ ಪೂರ್ವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.
ಮೂಡಲಗಿ ವಲಯವು ರಾಜ್ಯದಲ್ಲಿ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ತನ್ನ ವಿಶೇಷತೆ ಹೊಂದಿದೆ. ಇಲ್ಲಿಯ ಶಿಕ್ಷಕ ಸಮುದಾಯದ ಸತತ ಪ್ರಯತ್ನ ನಿರಂತರ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳ ಯಶಸ್ಸಗೆ ಶ್ರಮಿಸುತ್ತಿದೆ. ಪರೀಕ್ಷೆಗಳು ನಿಗದಿತ ಅವಧಿ, ವಿಷಯ ಹಾಗೂ ಪರೀಕ್ಷಾ ಮಂಡಳಿ ನೀಡಿರುವ ಕ್ರಮ ಸಂಖ್ಯೆಗನುಗುನವಾಗಿ ಜರುಗುತ್ತಿವೆ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಉತ್ತಮವಾಗಿದ್ದು ನಕಲು ಮುಕ್ತ ಕೇಂದ್ರಗಳನ್ನಾಗಿಸಿವೆ. ಮೂಡಲಗಿ ವಲಯವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಲು ಇಲ್ಲಿಯ ಅಧಿಕಾರಿ ವರ್ಗ ಹಾಗೂ ಶಿಕ್ಷಕ ಸಮೂಹದ ಅವಿರತ ಪ್ರಯತ್ನದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಮೂಡಲಗಿ ಬಿಇಒ ಎ.ಸಿ ಮನ್ನಿಕೇರಿ ಮಾಹಿತಿ ನೀಡಿ, ವಲಯದಲ್ಲಿ 6381 ಮಕ್ಕಳು ಪೂರ್ವ ಸಿದ್ದತಾ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಗತ್ಯ ಆಸನ ವ್ಯವಸ್ಥೆ, ಕುಡಿಯುವ ನೀರು, ಶಾಲಾ ಮಟ್ಟದಲ್ಲಿ ಕಸ್ಟೋಡಿಯನ್ ನೇಮಕ, ಪ್ರಶ್ನೆ ಪತ್ರಿಕೆ ಲಾಕರ್ ವ್ಯವಸ್ಥೆ, ಗೈರಾದ ವಿದ್ಯಾರ್ಥಿಗಳಿಗೆ ಅವತ್ತಿನ ದಿನವೇ ಮರುದಿನದ ಪರೀಕ್ಷೆಗಳಿಗೆ ಹಾಜರಾಗಲು ಕ್ರಮ ಕೈಗೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ನಿಯಮಾನುಸಾರ ಪರೀಕ್ಷೆಗಳನ್ನು ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮೂಡಲಗಿ ತಾಲೂಕಿನ ಸರಕಾರಿ ಪ್ರೌಢ ಶಾಲೆಗಳಾದ ಗುರ್ಲಾಪೂರ, ಕೆ.ಎಚ್.ಎಸ್ ಪ್ರೌಢ ಶಾಲೆ ಮೂಡಲಗಿ, ಉಮಾಬಾಯಿ ಪ್ರೌಢ ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿಜಯ ನಗರದ ಶಾಲೆಗಳಿಗೆ ಜಿಲ್ಲಾ ಬಿಸಿಯೂಟ ನಿರ್ಧೇಶಕ ದೀಪಕ ಕುಲಕರ್ಣಿ ಭೇಟಿ ನೀಡಿದರು. ಇಲ್ಲಿಯ ಅಡುಗೆ ಕೊಠಡಿ, ಸಿಬ್ಬಂದಿ ಸ್ವಚ್ಚತೆ, ಆಹಾರದ ಗುಣಮಟ್ಟದ ಕುರಿತು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಯರಾದ ಗೀತಾ ಕುಲಕರ್ಣಿ, ಎಸ್.ಬಿ ನ್ಯಾಮಗೌಡ, ಕೆ.ಆರ್ ಪಿರೋಜಿ, ಇಸಿಒ ಟಿ. ಕರಿಬಸವರಾಜು, ಸಿ.ಆರ್.ಪಿ ಕೆ.ಎಲ್ ಮೀಶಿ, ಶಶಿಕಲಾ ಕುಲಕರ್ಣಿ, ಕೆ.ಆರ್.ಎಮ್ ದೇಸಾಯಿ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.