ನಾಗ್ಪುರ: ಬ್ಲ್ಯಾಕ್ ಮ್ಯಾಜಿಕ್ನಲ್ಲಿ ತೊಡಗಿದ್ದ ಐವರನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಫೆ.26ರಂದು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ಬೆತ್ತಲೆಯಾಗಿ ಪೂಜೆ ಮಾಡಿದರೆ 50 ಕೋಟಿ ರೂಪಾಯಿ ಮಳೆಯಂತೆ ಸುರಿಯಲಿದೆ ಎಂದು ಅಪ್ರಾಪ್ತೆಯನ್ನು ಮರಳು ಮಾಡಲು ಹೋಗಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ ವ್ಯಕ್ತಿಯೊಬ್ಬ ಈ ತಿಂಗಳ ಆರಂಭದಲ್ಲಿ ಅಪ್ರಾಪ್ತೆಯ ಬಳಿ ತೆರಳಿದ್ದ. ಆತನ ಸಹವರ್ತಿಗಳು ಸೂಚನೆಯಂತೆ ವಿಶೇಷ ಪೂಜೆಯೊಂದನ್ನು ಮಾಡಿದರೆ ನೀನು ಶ್ರೀಮಂತೆ ಆಗಬಹುದೆಂದು ಆಕೆಗೆ ತಿಳಿಸಿದ್ದಾನೆ. ಆದರೆ, ಪೂಜೆ ಪರಿಣಾಮಕಾರಿ ಆಗಬೇಕಾದರೆ ನೀನು ಬೆತ್ತಲೆಯಾಗಬೇಕೆಂದು ಸಹ ಹೇಳಿದ್ದಾನೆ.
ಇದರಿಂದ ಅನುಮಾನಗೊಂಡ ಯುವತಿ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದಾಗ ಬೆಂಬಿಡದ ಆತನ ಅಪ್ರಾಪ್ತೆಗೆ ಸಾಕಷ್ಟು ಒತ್ತಾಯಿಸಿದ್ದಾರೆ. ಕೊನೆಗೆ ಅವನ ಕಾಟ ತಾಳಲಾರದೇ ಯುವತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಇದೀಗ ಪೊಲೀಸರು ಐವರು ಆರೋಪಿಗಳಾದ ವಿಕ್ಕಿ ಗಣೇಶ್ ಖಾಪ್ರೆ (20), ದಿನೇಶ್ ಮಹದೇವ್ ನಿಖಾರೆ (25), ರಾಮಕೃಷ್ಣ ದಾದಾಜಿ ಮಹಾಸ್ಕರ್ (41), ವಿನೋದ್ ಜಯರಾಮ್ ಮಾಸ್ರಮ್ (42) ಮತ್ತು ಸೊಪನ್ ಹರಿಬಾಹು ಕುಮ್ರೆ (35) ಬಂಧಿಸಿದ್ದಾರೆ.
ಹುಡುಗಿ ನೀಡಿದ ದೂರಿನ ಆಧಾರದ ಮೇಲೆ ವಿಕ್ಕಿ ಕಾಪ್ರೆ ಅನ್ನು ನಾಗ್ಪುರ ಪೊಲೀಸರು ಮೊದಲು ಬಂಧಿಸಿದರು. ಬಳಿಕ ವಿಚಾರಣೆ ನಡೆಸಿದಾಗ ಕಾಪ್ರೆ ತನ್ನ ಸಹವರ್ತಿಗಳ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಬಳಿಕ ಇನ್ನುಳಿದ ಆರೋಪಿಗಳನ್ನು ವಿವಿಧ ಪ್ರದೇಶಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.