ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಆರಂಭಗೊಳ್ಳಲಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಈಗಾಗಲೇ ಈ ಕಛೇರಿ ಆರಂಭಕ್ಕೆ ಎಜಿ ಕೋಡ್ (ಅಕೌಂಟಂಟ್ ಜನರಲ್) ಬಂದಿದ್ದು, ಇನ್ನು ಡಿಡಿಓ ಕೋಡ್ ಬರಬೇಕಿದೆ. ಇದರ ಜೊತೆಗೆ ಎಂಪಿಎಸ್ ಕೋಡ್, ಖಜಾನೆ-1 ಮತ್ತು ಖಜಾನೆ-2 ಕೂಡ ಅನುಮತಿಗೆ ಕಾಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಮೂಡಲಗಿಗೆ ಉಪನೋಂದಣಾಧಿಕಾರಿಗಳ ಕಾರ್ಯಾಲಯ ಆರಂಭವಾಗಲಿದೆ ಎಂದು ಹೇಳಿದರು.
ಮೂಡಲಗಿಯಲ್ಲಿ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ತಹಶೀಲ್ದಾರ ಕಛೇರಿ ಹತ್ತಿರ ಮೂರು ಕೊಠಡಿಗಳನ್ನು ನೀಡಲಾಗಿದೆ. ಜೊತೆಗೆ ಫರ್ನಿಚರ್ ಕಾಮಗಾರಿಯು ಈಗಾಗಲೇ ಮುಗಿದಿದೆ. ಮೂಡಲಗಿ ಹೊಸ ತಾಲೂಕು ರಚನೆಯಾದ ನಂತರ ಸಾರ್ವಜನಿಕರ ಬೇಡಿಕೆ ದಿನೇ ದಿನೇ ಹೆಚ್ಚುತ್ತಿತ್ತು. ಗೋಕಾಕದಲ್ಲಿ ರೈತರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿರುವುದರಿಂದ ಮೂಡಲಗಿ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಡಲಗಿಯಲ್ಲಿಯೇ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭವಾಗಲಿದೆ. ಇಡೀ ತಾಲೂಕಿನ ರೈತರ ಸೇವೆಗೆ ಕಛೇರಿಯು ಅಣಿಯಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
*ಫೋಟೋ*: ಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ ಹಾಗೂ ಅಧ್ಯಕ್ಷರು, ಕೆಎಂಎಫ್