Breaking News
Home / ಗೋಕಾಕ / ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ:ಜಗದೀಶ ಶೆಟ್ಟರ್

ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ:ಜಗದೀಶ ಶೆಟ್ಟರ್

Spread the love

 

ಗೋಕಾಕ: ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಾಥಮಿಕ ಹಂತವಾಗಿ ಮಠ-ಮಾನ್ಯಗಳು, ಜಿಲ್ಲೆಯ ಪ್ರಮುಖ ಮುಖಂಡರನ್ನು ಸಮಕ್ಷಮ ಭೇಟಿ ಮಾಡಿ ಬೆಂಬಲ ಕೋರುತ್ತಿರುವದಾಗಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.


ರವಿವಾರದಂದು ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ-7ರಂದು ನಡೆಯುವ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಸತತ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಉತ್ಸುಕತೆ ಜನರ ಮನಸ್ಸಿನಲ್ಲಿ ಬಂದಿದೆ. ಜನರು ಕಂಡ ಕನಸನ್ನು ನನಸು ಮಾಡಲು ಈಗಾಗಲೇ ಕಾರ್ಯಕರ್ತರ ಪಡೆ ಸಿದ್ದವಾಗಿದೆ. ದೇಶದಾದ್ಯಂತ ಮೋದಿಯವರ ಅಲೆ ಬೀಸಿದ್ದು, ಮತ್ತೊಂದು ಅವಧಿಗೆ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು.


ರವಿವಾರದಂದು ಶಾಸಕ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಮತಕ್ಷೇತ್ರದ ಅಂಕಲಗಿ, ಖನಗಾಂವ, ಹೂಲಿಕಟ್ಟಿ, ಮಮದಾಪೂರ, ಉಪ್ಪಾರಹಟ್ಟಿ, ಮಲ್ಲಾಪೂರ ಪಿ.ಜಿ. ಸಾವಳಗಿ, ಕೊಣ್ಣೂರ ಮರಡಿಮಠ, ಗೋಕಾಕ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅರಭಾವಿ ಕ್ಷೇತ್ರದ ಅರಭಾವಿ, ಅರಭಾವಿಮಠ, ಕಲ್ಲೋಳ್ಳಿ, ನಾಗನೂರ ಮತ್ತು ಮೂಡಲಗಿ ಪಟ್ಟಣದಲ್ಲಿ ಸಂಚರಿಸಿದ್ದೇನೆ. ಎಲ್ಲ ಊರುಗಳಲ್ಲಿ ನನಗೆ ಭಾರಿ ಬೆಂಬಲ ಸಿಗುತ್ತಿದೆ. ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಾರಕಿಹೊಳಿ ಸಹೋದರರನ್ನು ರಾಜ್ಯಮಟ್ಟದ ನಾಯಕರೆಂದು ಶೆಟ್ಟರ ಉಚ್ಚರಿಸಿದರು.
ಬಿಜೆಪಿಯ ಶಾಸಕರು, ಮಾಜಿ ಶಾಸಕರು ಮತ್ತು ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ನನ್ನ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಾನು ಹೊರಗಿನವನು ಎಂಬ ಬೇಧ-ಭಾವ ಎಲ್ಲಿಯೂ ಕಂಡು ಬಂದಿಲ್ಲ. ಇದನ್ನು ವಿರೋಧಿಗಳು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ನನಗೂ-ಬೆಳಗಾವಿಗೂ ಅವಿನಾಭಾವ ಸಂಬಂಧವಿದ್ದು, ಕಳೆದ ಮೂವತ್ತು ವರ್ಷಗಳಿಂದ ಈ ಜಿಲ್ಲೆಯ ಜನರೊಂದಿಗೆ ಒಡನಾಟವನ್ನು ಹೊಂದಿದ್ದೇನೆ. ಬೆಳಗಾವಿ ಸುವರ್ಣಸೌಧ ನಿರ್ಮಾಣದಲ್ಲೂ ನಾನು ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರು ಮಹತ್ತರ ಪಾತ್ರ ವಹಿಸಿದ್ದೇವೆ ಎಂದು ಹೇಳಿದರು.
ನಮ್ಮ ಪಕ್ಷವು ಈಗಾಗಲೇ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ಕಾರ್ಯಕರ್ತರು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಕಾಂಗ್ರೇಸ್ ಪಕ್ಷದಲ್ಲಿ ಯಾರು ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೇಸ್ 50 ಸ್ಥಾನಗಳನ್ನು ಗಳಿಸಲು ಹೆಣಗಾಡುತ್ತಿದೆ. ಫಲಿತಾಂಶದ ನಂತರ ಕಾಂಗ್ರೇಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಶೆಟ್ಟರ ವ್ಯಂಗ್ಯವಾಡಿದರು.
ಜಾರಕಿಹೊಳಿ ಸಹೋದರರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ಶೆಟ್ಟರ್: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸದಲ್ಲಿ ಭೋಜನ ಸ್ವೀಕರಿಸಿದ ಜಗದೀಶ ಶೆಟ್ಟರ್ ಅವರು ನಂತರ ಶಾಸಕದ್ವಯರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಜೊತೆ ಸುಮಾರು 20 ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಶೆಟ್ಟರ್ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ರೂಪಿಸಿದರೆಂದು ತಿಳಿದು ಬಂದಿದೆ.
ಅರಭಾವಿ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಅವರಿಗೆ ಹೆಚ್ಚಿನ ಮತಗಳ ಲೀಡ್ ನೀಡುತ್ತೇವೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶೆಟ್ಟರ್ ಅವರನ್ನು ಸಂಸತ್ತಿಗೆ ಕಳುಹಿಸುವುದು ತಮ್ಮ ಗುರಿಯಾಗಿದೆ ಜೊತೆಗೆ ಉಭಯ ಕ್ಷೇತ್ರಗಳ ಕಾರ್ಯಕರ್ತರ ಸಭೆಯನ್ನು ಎ-7ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅನಿಲ ಬೆನಕೆ, ಎಮ್.ಎಲ್.ಮುತ್ತೇನ್ನವರ, ಯುವ ಮುಖಂಡರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ, ಮುರಘೇಂದ್ರ ಪಾಟೀಲ, ಕಿರಣ ಜಾಧವ, ಡಾ|| ರಾಜೇಶ ನೇರಲಿ, ಡಾ|| ಕೆ.ವಿ.ಪಾಟೀಲ, ಘೂಳಪ್ಪ ಹೊಸಮನಿ, ಗೋವಿಂದ ಕೊಪ್ಪದ, ಮಹಾದೇವ ಶೆಕ್ಕಿ, ಮುತ್ತಪ್ಪ ಮನ್ನಾಪೂರ, ಭೀಮಶಿ ಭರಮನ್ನವರ, ರಾಜೇಂದ್ರ ಗೌಡಪ್ಪಗೋಳ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

About Ad9 Haberleri

Check Also

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

Spread the love ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ …

Leave a Reply

Your email address will not be published. Required fields are marked *