ಕಾರ್ಮಿಕರ ದಿನಾಚರಣೆ ವಿಶೇಷವಾಗಿ ಕೋವಿಡ್ ವಾರಿಯರ್ ಗಳಿಗೆ ನೆರವು
ಚಿಕ್ಕೋಡಿ: ಕಾರ್ಮಿಕರ ದಿನಾಚರಣೆಯಂದು ಕೋವಿಡ್ ವಾರಿಯರ್ ಗಳಿಗೆ ಶಾಸಕ ಗಣೇಶ್ ಹುಕ್ಕೇರಿಯವರಿಂದ ಸಿಹಿ ಸುದ್ದಿ ಸಿಕ್ಕಿದೆ.
ತನ್ನ ಮೂರು ತಿಂಗಳ ಸಂಬಳವನ್ನು ತಮ್ಮ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ನೀಡಲು ಶಾಸಕ ಗಣೇಶ ಹುಕ್ಕೇರಿ ಮುಂದಾಗಿದ್ದಾರೆ.
ಗಣೇಶ್ ಹುಕ್ಕೇರಿ ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕ ತನ್ನ ಕ್ಷೇತ್ರದ ಕೊರೋನಾ ಮುಂಚೂಣಿ ಕಾರ್ಯಕರ್ತರಾದ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳ ಸಂಬಳವವನ್ನು ನೀಡಲು ತೀರ್ಮಾನಿಸಿದ್ದಾರೆ.
ಮುಖ್ಯಮಂತ್ರಿಗಳ ಮನವಿಯಂತೆ ಒಂದು ತಿಂಗಳ ಸಂಬಳವನ್ನ ಕೋವಿಡ್ ನಿಧಿಗೆ ನೀಡಿದ್ದಾರೆ. ಅದರ ಜೊತೆಗೆ ಅವರ ಮುಂದಿನ ಮೂರು ತಿಂಗಳ ಸಂಬಳವನ್ನು ಕೋವಿಡ್ ವಾರಿಯರ್ ಗಳಿಗೆ ಬಳಕೆ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರು ಬರೆದುಕೊಂಡಿದ್ದು, “ರಾಜ್ಯ ಸರ್ಕಾರ ನನಗೆ ನೀಡುವ ಸಂಬಳದಲ್ಲಿ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಮನವಿಯಂತೆ ಕೋವಿಡ್ ನಿಧಿಗೆ ನೀಡುತ್ತಿದ್ದೇನೆ. ಅದನ್ನು ಹೊರತುಪಡಿಸಿ, ಮುಂದಿನ ಮೂರು ತಿಂಗಳ ಸಂಬಳವನ್ನು ನನ್ನ ಕ್ಷೇತ್ರದ ಆಶಾಕಾರ್ಯಕರ್ತೆಯರಿಗೆ ನೀಡಲು ತೀರ್ಮಾನಿಸಿದ್ದೇನೆ. ಆಶಾ ಕಾರ್ಯಕರ್ತೆಯರಿಗೆ ನನ್ನಿಂದ ಒಂದು ಪುಟ್ಟ ಕಾಣಿಕೆಯನ್ನು ಈ ಕಾರ್ಮಿಕ ದಿನದಂದು ನೀಡಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.