Breaking News

ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಎಲ್ಲ ಇಲಾಖೆಗಳ ಸಮನ್ವಯತೆ ಅಗತ್ಯ : ಎಸಿ ಬಗಲಿ

Spread the love


ಗೋಕಾಕ : ಸರ್ಕಾರ ನೀಡಿದ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಆಚರಣೆ ತರುವುದರೊಂದಿಗೆ ಮಹಾಮಾರಿ ಕೊರೋನಾ ವೈರಸ್‍ನ ಎರಡನೇ ಅಲೆಯನ್ನು ನಿಯಂತ್ರಿಸಲು ಎಲ್ಲ ಇಲಾಖೆಯವರು ಒಗ್ಗಟ್ಟಿನಿಂದ ಶ್ರಮಿಸುವಂತೆ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು.
ಶುಕ್ರವಾರದಂದು ನಗರದ ಹೊರವಲಯದ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ವಿವಿಧ ಇಲಾಖೆಗಳ ಮುಖ್ಯಸ್ಥರ ಕೋವಿಡ್ ನಿಯಂತ್ರಣ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಜೀವ ಮತ್ತು ಜೀವನಕ್ಕೆ ಮಹತ್ವ ನೀಡಿ ಸರ್ಕಾರ ಜನತಾ ಕಪ್ರ್ಯೂವನ್ನು ಜಾರಿಗೊಳಿಸಲಾಗಿದೆ. ಜನತೆಗೆ ಈ ಕುರಿತು ಎಲ್ಲ ಇಲಾಖೆಯವರು ಜಾಗೃತಿ ಮೂಡಿಸಬೇಕು. ಗ್ರಾಮ ಮತ್ತು ವಾರ್ಡುಗಳಲ್ಲಿ ಟಾಸ್ಕ್‍ಪೋರ್ಸ್‍ಗಳು ಈ ಹಿಂದೆ ಕಾರ್ಯನಿರ್ವಹಿಸಿದಂತೆ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮ ಮತ್ತು ವಾರ್ಡಗಳಲ್ಲಿ ಜನಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿ ಅವರಿಗೆ ಸರಿಯಾದ ಮಾಹಿತಿ ನೀಡಿ ರೋಗ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು.
ವ್ಯಾಕ್ಸಿನ್ ನೀಡುವ ಕಾರ್ಯ ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಇದನ್ನು ಮುಂದುವರೆಸಲಾಗುವುದು. ಖಾಸಗಿ ಆಸ್ಪತ್ರೆಗಳ ಬೆಡ್‍ಗಳನ್ನು ಪಡೆದು ಅಲ್ಲಿ ಸರ್ಕಾರ ನಿಗಧಿಪಡಿಸಿದ ದರಗಳಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಜಾತ್ರೆ, ಸಂತೆಗಳನ್ನು ನಿಷೇಧಿಸಲಾಗಿದೆ. ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ಸಾವಿನ ಪ್ರಮಾಣ ಕಡಿಮೆ ಮಾಡಲು ಹೆಚ್ಚಿನ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದಾಗಿ ಕೋವಿಡ್ ಸೊಂಕಿತರಿಗೆ ಮಲ್ಲಾಪೂರ ಪಿಜಿ ಮತ್ತು ಮೂಡಲಗಿಯಲ್ಲಿ ತೆರೆಯಲಾಗಿರುವ ಆಕ್ಸಿಜನ್ ಸೌಲಭ್ಯವುಳ್ಳ ಕೋವಿಡ್ ಕೇಂದ್ರಗಳನ್ನು ಪ್ರಾರಂಭಿಸಿರುವುದನ್ನು ಸ್ವತಃ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫ್‍ರೆನ್ಸ್‍ನಲ್ಲಿ ಶ್ಲಾಘಿಸಿದ್ದಾರೆ ಎಂದ ಅವರು, ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಹೇಳಿದರು.
ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ ಅವರು ಮಾತನಾಡಿ, ಕೊರೋನಾ ವೈರಸ್ ರೂಪಾಂತರಗೊಂಡು ತನ್ನ ಲಕ್ಷಣಗಳಲ್ಲಿ ಬದಲಾವಣೆ ಮಾಡಿಕೊಂಡಿರುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಶರವೇಗದಲ್ಲಿ ಹರಡುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೆಮ್ಮು, ನೆಗಡಿ, ಜ್ವರ, ಮೈಕೈ ನೋವು, ಹಸಿವು ಆಗದೇ ಇರುವುದು, ಮೂಗು ವಾಸನೆ ಕಳೆದುಕೊಳ್ಳುವುದು, ನಾಲಿಗೆ ರುಚಿ ಕಳೆದುಕೊಳ್ಳುವುದು, ಅತೀಸಾರ, ಉಸಿರಾಟದ ಸಮಸ್ಯೆ, ಮೂಗು ಹಾಗೂ ಗಂಟಲಿನಿಂದ ರಕ್ತ ಸ್ರಾವವಾಗುವುದು, ಸುಸ್ತು, ದೇಹದಲ್ಲಿ ನೋವು ಕಾಣ ಸಿಕೊಳ್ಳುವುದು, ನಾಲಿಗೆ, ಕೈ ಹಾಗೂ ಕಾಲಿನ ತುದಿ ಬೆರಳುಗಳು ನೀಲಿ ಬಣ್ಣಕ್ಕೆ ತಿರುಗುವುದು ಮುಂತಾದ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಜನತೆ ಧೈರ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಈ ರೋಗದ ವಿರುದ್ಧ ಹೋರಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ ನವೀನ ಹುಲ್ಲೂರ, ಮೂಡಲಗಿ ತಾಪಂ ಇಓ ಪ್ರಕಾಶ ವಡ್ಡರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ್, ಸಿಪಿಐಗಳಾದ ಗೋಪಾಲ ರಾಠೋಡ, ಸತೀಶ ಕಣಮೇಶ್ವರ, ಗೋಕಾಕ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿಡಿಪಿಓ ವಾಯ್.ಎಂ. ಗುಜನಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಜಿ.ಬಿ. ಬಳಗಾರ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಉಪಸ್ಥಿತರಿದ್ದರು.
ಬಾಕ್ಸ್ : ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ 40 ಹಾಸಿಗೆಗಳಿಗೆ ಆಕ್ಷಿಜನ್ ಸೌಲಭ್ಯ ಕಲ್ಪಿಸಲಾಗಿದೆ. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊರೋನಾ ಕಾಳಗಿ ಕೇಂದ್ರದಲ್ಲಿ 20 ಹಾಸಿಗೆಗಳಿಗೆ ಆಕ್ಷಿಜನ್ ಸೌಲಭ್ಯ ಕಲ್ಪಿಸಲಾಗಿದೆ. ಆಕ್ಷಿಜನ್ ರಹಿತವಾಗಿ 60 ಹಾಸಿಗೆಗಳ ವ್ಯವಸ್ಥೆ ಸಹ ಮಾಡಲಾಗಿದೆ. ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 24 ಹಾಸಿಗೆಗಳ ಆಕ್ಷಿಜನ್ ಸೌಲಭ್ಯ ಕಲ್ಪಿಸಲಾಗಿದೆ. ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾದಲ್ಲಿ ಗೋಕಾಕ ಆಶ್ರಯ ಬಡಾವಣೆಯ ಡಿ.ದೇವರಾಜ ಅರಸು ವಸತಿ ನಿಲಯ ಮತ್ತು ಮೂಡಲಗಿಯ ಮೆಟ್ರಿಕ್ ನಂತರದ ಬಾಲಕೀಯರ ವಿದ್ಯಾರ್ಥಿ ನಿಲಯದಲ್ಲಿ ಕೊರೋನಾ ಕಾಳಜಿ ಕೇಂದ್ರಗಳಲ್ಲಿ ಪ್ರಾರಂಭಿಸುವ ಯೋಜನೆ ನಮ್ಮ ಮುಂದಿದೆ. ಸರ್ಕಾರದ ನಿರ್ದೇಶನುಸಾರ ಪ್ರತಿಯೊಬ್ಬರೂ ಮಾಸ್ಕ್‍ಗಳನ್ನು ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ ಎರಡನೇ ಅಲೆಯ ಶಮನಕ್ಕಾಗಿ ನಾವೆಲ್ಲರೂ ಪಣ ತೊಡಬೇಕಿದೆ.
ಬಾಲಚಂದ್ರ ಜಾರಕಿಹೊಳಿ,
ಅಧ್ಯಕ್ಷರು, ಕೆಎಂಎಫ್ ಮತ್ತು ಶಾಸಕರು, ಅರಭಾವಿ

 


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …