ಘಟಪ್ರಭಾ: ಈ ಚುನಾವಣೆ ವ್ಯಕ್ತಿಗಳ ನಡುವಿನ ಚುನಾವಣೆಯಲ್ಲ. ಪಕ್ಷಗಳ ಮಧ್ಯ ನಡೆಯುತ್ತಿರುವ ಉಪ ಚುನಾವಣೆ. ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯವರ ಪಾರದರ್ಶಕ ಆಡಳಿತವನ್ನು ಮೆಚ್ಚಿ ಕೊಂಡಾಡುತ್ತಿರುವ ಸಮಯದಲ್ಲಿ ಮೋದಿಯವರ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಿರುವ ಮಾಜಿ ಸಿಎಂ ಸಿದ್ಧರಾಮಯ್ಯನವರ ನೈತಿಕತೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಸೋಮವಾರದಂದು ಸಮೀಪದ ರಾಜಾಪೂರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಪರ ಮತಯಾಚಿಸಿ ಮಾತನಾಡಿದ ಅವರು, ದೇಶಪ್ರೇಮ ತುಂಬಿಕೊಂಡಿರುವ ಮೋದಿಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ಧರಾಮಯ್ಯನವರಿಗಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ದಕ್ಷ, ಪಾರದರ್ಶಕತೆಯಿಂದ ಆಡಳಿತ ನಡೆಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಸರ್ಕಾರದ ಬಗ್ಗೆ ಮಾತನಾಡುತ್ತಿರುವ ಸಿದ್ಧರಾಮಯ್ಯನವರು ತಾವು ಆಡಳಿತ ನಡೆಸಿದ ತಮ್ಮ ಕಾಂಗ್ರೇಸ ಸರ್ಕಾರ ಹೇಗಿತ್ತು ಎಂಬುದನ್ನು ಎದೆ ಮುಟ್ಟಿಕೊಂಡು ಮಾತನಾಡಲಿ. ಸುಮ್ಮ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಜೈಲಿಗೆ ಹೋಗಿ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಮುಂದಿಟ್ಟಕೊಂಡು ಮತ ಕೇಳುತ್ತಿರುವ ಕಾಂಗ್ರೇಸ್ಸಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಇದ್ದುಕೊಂಡು ಸಿದ್ಧರಾಮಯ್ಯ ಸೋತರು. ಈ ಸೋಲಿಗೆ ಬಿಜೆಪಿ ಕಾರಣವೆಂದು ಆರೋಪಿಸಿದರು. ಆದರೆ ಅಸಲಿ ವಿಷಯ ಕಾಂಗ್ರೇಸ್ಸಿಗರೇ ಸಿದ್ಧರಾಮಯ್ಯನವರನ್ನು ಸೋಲಿಸಿದರು. ನಂತರ ಕಣ ್ಣೀರು ಸುರಿಸಿದರು. ಪರಮೇಶ್ವರ ಅವರನ್ನು ನೀವೇ ಸೋಲಿಸಿದಾಗ ಅವರ ಕಣ ್ಣೀರು ನಿಮಗೆ ನೆನಪಾಗಿಲ್ಲವೇ ಎಂದು ಸಿದ್ಧರಾಮಯ್ಯನವರನ್ನು ಪ್ರಶ್ನಿಸಿದರು. ಕಾಂಗ್ರೇಸ್ ಪಕ್ಷಕ್ಕೆ ಇಂದು ಹೇಳುವವರು, ಕೇಳುವವರು ಯಾರೂ ಇಲ್ಲ. ಅನಾಥ ಪಕ್ಷವಾಗಿದೆ. ಇದುವರೆಗೂ ಅದಕ್ಕೆ ಪರ್ಮನಂಟ್ ಅಧ್ಯಕ್ಷರು ಯಾರಿಲ್ಲ. ಇನ್ನೂ ಅಧಿಕಾರಕ್ಕೆ ಬರದಯೇ ಸಿಎಂ ಗಾದಿಗಾಗಿ ಸಿದ್ಧು-ಡಿಕೆಶಿ ಸೆಣಸಾಟ ನಡೆಸುತ್ತಿದ್ದಾರೆ. ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಕಾಂಗ್ರೇಸ್ ಪಕ್ಷವನ್ನು ಹುಡುಕಬೇಕಾಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ. ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಒಂದು ಕಾಲದಲ್ಲಿ ಬಿಜೆಪಿ ಎಂದರೆ ಬ್ರಾಹ್ಮಣರ ಪಕ್ಷವೆಂದು ವಿರೋಧಿಗಳು ಮೂದಲಿಸುತ್ತಿದ್ದರು. ಆದರೆ ಇಂದು ಎಲ್ಲ ವರ್ಗಗಳ, ಎಲ್ಲ ಧರ್ಮಗಳ ಪಕ್ಷವಾಗಿ ಭಾರತೀಯರಲ್ಲಿ ಮನೆಮಾತಾಗಿದೆ ಎಂದು ಹೇಳಿದರು.
ಮುಸ್ಲಿಂ ಹೆಣ್ಣು ಮಕ್ಕಳಿಗೆ ಸ್ವಾಭಿಮಾನದ ಬದುಕು ತೋರಿಸಿದ ಗಂಡುಗಲಿ ಮೋದಿಯವರೆಂದು ಸ್ವತಃ ಮುಸ್ಲಿಂ ಮಹಿಳೆಯರು ಹೇಳುತ್ತಿದ್ದಾರೆ. ಭಾರತದಲ್ಲಿ ನಾವು ಮಹಿಳೆಯರಿಗೆ ನೀಡುತ್ತಿರುವ ಗೌರವ ಯಾವ ರಾಷ್ಟ್ರಗಳಲ್ಲಿಯೂ ನೀಡುತ್ತಿಲ್ಲ. ಮಹಿಳೆಯರೆಂದರೆ ಪೂಜ್ಯ ಭಾವನೆಯಿಂದ ನೋಡುತ್ತೇವೆ. ತ್ರಿವಳಿ ತಲಾಖ್ ರದ್ದು, ರಾಮ ಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವ್ಯಾಪಿಯಾಗಿ ಜನ ಮನ್ನನೆಗೆ ಖ್ಯಾತಿಯಾಗಿದ್ದಾರೆ. ಪ್ರಧಾನಿಯವರ ಕೈಬಲಪಡಿಸಲು ಅಭ್ಯರ್ಥಿ ಮಂಗಳಾ ಅಂಗಡಿಯವರಿಗೆ ತಮ್ಮ ಅಮೂಲ್ಯ ಮತ ನೀಡಿ ಆಯ್ಕೆ ಮಾಡುವಂತೆ ಅವರು ಮನವಿ ಮಾಡಿಕೊಂಡರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ, ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಬೆಳಗಾವಿ ಸಮಗ್ರ ಪ್ರಗತಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಕೋರಿದರು.
ವೇದಿಕೆಯಲ್ಲಿ ಮಾಜಿ ಸಂಸದ ಬ್ಯಾರಿಸ್ಟರ್ ಅಮರಸಿಂಹ ಪಾಟೀಲ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ನಾಗಪ್ಪ ಶೇಖರಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ನ್ಯಾಯವಾದಿ ಲಕ್ಷ್ಮಣ ತಪಸಿ, ಮುಖಂಡರಾದ ಬಸವಂತ ಕಮತಿ, ವಿಠ್ಠಲ ಪಾಟೀಲ, ಸಂಜು ಬೈರುಗೋಳ, ಬಸವರಾಜ ಪಂಡ್ರೋಳಿ, ಬೈರು ಯಕ್ಕುಂಡಿ, ಪ್ರಭಾ ಶುಗರ್ ನಿರ್ದೇಶಕರಾದ ಲಕ್ಷ್ಮಣ ಗಣಪಗೋಳ, ಶಿವಲಿಂಗ ಪೂಜೇರಿ, ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ರಾಮಣ್ಣಾ ಹುಕ್ಕೇರಿ, ಸುಭಾಸ ಕುರಬೇಟ, ಬಿ.ಬಿ.ದಾಸನವರ, ವಸಂತ ದಳವಾಯಿ, ಓಬಿಸಿ ಜಿಲ್ಲಾಧ್ಯಕ್ಷ ಬಸು ಮಾಳೇದ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಸಚಿವರಾದ ಈಶ್ವರಪ್ಪ, ಉಮೇಶ ಕತ್ತಿ ಅವರ ತಂಡ ವಡೇರಹಟ್ಟಿ, ಕುಲಗೋಡ, ಬೆಟಗೇರಿ ಗ್ರಾಮಗಳಿಗೆ ತೆರಳಿ ಮಂಗಳಾ ಅಂಗಡಿ ಪರ ಮತಯಾಚಿಸಿದರು.