Breaking News

ಶಿಕ್ಷಣ ರಂಗದ ಪ್ರಗತಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅನನ್ಯವಾಗಿದೆ

Spread the love


ಗೋಕಾಕ : ಶಿಕ್ಷಣ ರಂಗದ ಪ್ರಗತಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅನನ್ಯವಾಗಿದೆ. ಮೂಡಲಗಿ ವಲಯದ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈಯಲು ಇವರ ಪ್ರೇರಣೆಯೇ ಕಾರಣವಾಗಿದೆ ಎಂದು ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರದಂದು ಮೂಡಲಗಿ ಶೈಕ್ಷಣಿಕ ವಲಯದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲು ಸನ್ನದ್ಧರಾಗಬೇಕು. ಯಾವುದೇ ಭಯ-ಭೀತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಏಕಾಗ್ರತೆಯಿಂದ ಎದುರಿಸಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಮೂಡಲಗಿ ವಲಯ ಉತ್ತಮ ಸಾಧನೆ ತೋರಲು ವಿದ್ಯಾರ್ಥಿಗಳು ಅಭ್ಯಾಸದತ್ತ ಚಿತ್ತನ್ನು ಹರಿಸುವಂತೆ ಹೇಳಿದರು.

ಮೂಡಲಗಿ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಮಾತನಾಡಿ, ಫೆ.17 ರಿಂದ 24 ರವರೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ 6381 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಇದರಲ್ಲಿ ವಲಯದ ಎಲ್ಲ 74 ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಕಳೆದ ಅಗಸ್ಟ್ ತಿಂಗಳಲ್ಲಿ ಪ್ರವಾಹದಿಂದಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಅವರ ಆರ್ಥಿಕ ತೊಂದರೆ ನಿವಾರಿಸಲು ಶಾಸಕರು ಉಚಿತವಾಗಿ ಉತ್ತರ ಪತ್ರಿಕೆಗಳನ್ನು ನೀಡುತ್ತಿದ್ದಾರೆ. ಪ್ರತಿ ಹಂತದಲ್ಲೂ ನಮ್ಮ ಇಲಾಖೆಯ ಎಲ್ಲ ಕಾರ್ಯಕ್ರಮಗಳಿಗೆ ತಮ್ಮ ತನು-ಮನ-ಧನದ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ರಂಗದ ಸರ್ವಾಂಗೀಣ ಪ್ರಗತಿಗೆ ಕೈ ಜೋಡಿಸುತ್ತಿದ್ದಾರೆಂದು ಶ್ಲಾಘಿಸಿದರು.

ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಯುವ ಮುಖಂಡ ನಾಗಪ್ಪ ಶೇಖರಗೋಳ, ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜನಮಟ್ಟಿ, ಶಿವು ಪಾಟೀಲ, ಪರಮಾನಂದ ಕೋಣಿ, ಮುಂತಾದವರು ಉಪಸ್ಥಿತರಿದ್ದರು.

ಅಧಿಕಾರಿಗಳ ನಡೆ-ಪ್ರೌಢ ಶಾಲೆಗಳ ಕಡೆ : ಮಾರ್ಚ ತಿಂಗಳಲ್ಲಿ ಜರುಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಳಕ್ಕಾಗಿ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸಂಬಂಧ ಇದೇ ಮೊದಲ ಬಾರಿಗೆ ಎಲ್ಲ 31 ಇಲಾಖೆಗಳ ಅಧಿಕಾರಿಗಳು ಪ್ರೌಢ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಧೈರ್ಯ ಬರುವಂತಾಗಿದೆ. ರಾಜ್ಯದಲ್ಲಿಯೇ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …