*ತಮ್ಮ ಗೃಹ ಕಛೇರಿಯಲ್ಲಿ ಬಿಸಿಯೂಟ ಸಿಬ್ಬಂದಿಯನ್ನುದ್ಧೇಶಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ*
*ಗೋಕಾಕ* : ಬಿಸಿಯೂಟ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಕುರಿತಂತೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ಅವರ ಸಮಸ್ಯೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್‍ಎಸ್‍ಎಫ್ ಗೃಹ ಕಛೇರಿಯಲ್ಲಿ ಗೋಕಾಕ-ಮೂಡಲಗಿ ತಾಲೂಕುಗಳ ಮಧ್ಯಾಹ್ನದ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರನ್ನುದ್ಧೇಶಿಸಿ ಮಾತನಾಡಿದ ಅವರು, ನಿಮ್ಮೆಲ್ಲ ಹೋರಾಟಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಕಳೆದ 2 ವರ್ಷಗಳಿಂದ ಕಾರ್ಯಕರ್ತೆಯರು ರಾಜ್ಯಾಧ್ಯಂತ ಹೋರಾಟಗಳನ್ನು ಮಾಡುತ್ತಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆದು ಪ್ರಯತ್ನಿಸಿದ್ದಾರೆ. ಮುಂದೆ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ವಿಸ್ತøತವಾಗಿ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇನೆ. ಬಿಸಿಯೂಟ ಕಾರ್ಯಕರ್ತೆಯರ ವೇತನವನ್ನು ಹೆಚ್ಚಳ ಮಾಡಿ ಅವರ ಕೆಲಸಕ್ಕೆ ಗೌರವ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಸುಮಾರು 1450 ಕ್ಕೂ ಹೆಚ್ಚು ಕಾರ್ಯಕರ್ತೆಯರು ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 3600 ರೂ.ಗಳನ್ನು ಸರ್ಕಾರ ಇವರಿಗೆ ಗೌರವ ಧನ ನೀಡುತ್ತಿದೆ. ಆದರೆ ಕುಟುಂಬ ನಿರ್ವಹಣೆಗೆ ಈ ವೇತನ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ 5000 ರೂ.ಗಳವರೆಗೆ ಅವರ ವೇತನವನ್ನು ಹೆಚ್ಚಳ ಮಾಡಿದರೆ ಅನುಕೂಲವಾಗುತ್ತದೆ. ಜೊತೆಗೆ 60 ವರ್ಷ ಮೇಲ್ಪಟ್ಟ ಕೆಲಸ ನಿರ್ವಹಿಸಿ ಈಗ ವಿಶ್ರಾಂತರಾಗಿರುವ ಕಾರ್ಯಕರ್ತೆಯರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡುವಂತೆಯೂ ಅವರು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ವಸತಿ ರಹಿತ ಬಿಸಿಯೂಟ ಕಾರ್ಯಕರ್ತೆಯರಿಗೆ ವಸತಿ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ತಿಳಿಸಿದ ಅವರು, ಕೋವಿಡ್ 19 ಸಮಯದಲ್ಲಿ ಕೋರಾನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ್ದನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ. ಮಲಬನ್ನವರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.