Breaking News
Home / ಗೋಕಾಕ / ಅರಭಾವಿ ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ ನ. 20 ಕ್ಕೆ ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಭಾವಿ ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ ನ. 20 ಕ್ಕೆ ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

*ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಭಕ್ತರ ಪಾಲಿಗೆ ಕಾಮಧೇನುವಾಗಿದ್ದರು- ಡಾ. ಸಿದ್ಧರಾಮ ಮಹಾಸ್ವಾಮಿಗಳ ಬಣ್ಣನೆ*

*ಘಟಪ್ರಭಾ* : ಅರಭಾವಿ ದುರದುಂಡೀಶ್ವರ ಮಠದ ಪೀಠಾಧಿಪತಿಯಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ನಿಧನದಿಂದ ಅರಭಾವಿ ಮಠದ ನೂತನ ಪೀಠಾಧಿಪತಿಗಳ ಪೀಠಾರೋಹಣ ಕಾರ್ಯಕ್ರಮವನ್ನು ಬರುವ ದಿ. 20 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಅರಭಾವಿ ಮಠದ ಸಭಾ ಭವನದಲ್ಲಿ ಶನಿವಾರದಂದು ನೂತನ ಪೀಠಾಧಿಪತಿಗಳ ಪೀಠಾರೋಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅರಭಾವಿ ಮಠದ ಪೂಜ್ಯರ ಅಗಲಿಕೆಯಿಂದ ಸಕಲ ಸದ್ಭಕ್ತರಿಗೆ ಅಪಾರ ನೋವುಂಟಾಗಿದೆ ಎಂದು ಹೇಳಿದರು.
ಬರಗಾಲ, ಸಮಯದ ಅಭಾವ ಮತ್ತು ಹಿಂದಿನ ಪೂಜ್ಯರ ಅಗಲಿಕೆಯ ನೋವು ಇನ್ನೂ ಮಾಸದಿರುವುದರಿಂದ ಬರುವ ದಿ. 20 ರ ಸೋಮವಾರದಂದು ಶ್ರೀಮಠದ ನೂತನ ಪೀಠಾಧಿಪತಿಗಳ ಪೀಠಾರೋಹಣ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ, ಅಷ್ಟೇ ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.


ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಸರಳತೆಗೆ ಹೆಸರಾದವರು. ಯಾವುದೇ ಆಡಂಬರವಿಲ್ಲದೇ ಜೀವನ ಸಾಗಿಸಿದವರು. 1992 ರಿಂದ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡ ಬಾಲಚಂದ್ರ ಜಾರಕಿಹೊಳಿ ಅವರು, ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಅವರ ಮಾರ್ಗದರ್ಶನವಿತ್ತು. ಶ್ರೀಗಳ ಆಶೀರ್ವಾದದ ಫಲದಿಂದ ಕಾರ್ಖಾನೆಯು ರೈತರ ಸಹಕಾರದೊಂದಿಗೆ ಇಲ್ಲಿಯವರೆಗೂ ಸುಗಮವಾಗಿ ನಡೆಯುತ್ತಿದೆ ಎಂದು ಸ್ಮರಿಸಿಕೊಂಡರು.
ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಹುಟ್ಟುವಾಗಿ ಮಾನವರಾಗಿ, ಹೋಗುವಾಗ ದೇವರಾಗಿ ಹೋದರು. ಶ್ರೀಮಠದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ರಾಜ್ಯ ವ್ಯಾಪ್ತಿಯಲ್ಲಿ ಅಪಾರ ಭಕ್ತ ಸಮೂಹವನ್ನು ಸಂಪಾದಿಸಿದ್ದರು. ಇವರ ಅಗಲಿಕೆಯಿಂದ ಭಕ್ತರೆಲ್ಲರೂ ಬಡವಾಗಿದ್ದಾರೆ ಎಂದು ಹೇಳಿದರು
ಗದಗ-ಡಂಬಳ-ಎಡೆಯೂರು ಸಿದ್ಧಲಿಂಗ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡಿರುವ ಗುರುಬಸವಲಿಂಗ ಮಹಾಸ್ವಾಮಿಗಳನ್ನು ಈಗಾಗಲೇ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಇದೇ ನವ್ಹೆಂಬರ್ 20 ರಂದು ನಡೆಯುವ ಪೀಠಾರೋಹಣ ಕಾರ್ಯಕ್ರಮದಲ್ಲಿ ಅರಭಾವಿ ಮಠದ ನೂತನ ಪೀಠಾಧಿಪತಿಯಾಗಿ ಗುರುಬಸವಲಿಂಗ ಮಹಾಸ್ವಾಮಿಗಳು ಪೀಠವನ್ನು ಅಲಂಕರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಳೆದ 40 ವರ್ಷಗಳಿಂದ ಅರಭಾವಿ ಭಾಗದಲ್ಲಿ ಎಲ್ಲ ಸದ್ಭಕ್ತರ ಆಶಯಗಳಿಗೆ ಪೂರಕವಾಗಿ ಶ್ರೀಮಠದ ಅಭಿವೃದ್ಧಿಗೆ ತಮ್ಮದೇಯಾದ ವಿಶಿಷ್ಟ ಸೇವೆ ಸಲ್ಲಿಸಿರುವ ಸಿದ್ಧಲಿಂಗ ಮಹಾಸ್ವಾಮಿಗಳು ಭಕ್ತರ ಪಾಲಿಗೆ ಕಾಮಧೇನು ಆಗಿದ್ದರು. ಮೌನವಾಗಿ ದಿವ್ಯ ಚೇತನರಾಗಿ ಈ ಪೀಠದಲ್ಲಿ ನೆಲೆಸಿರುವ ಲಿಂ. ಶ್ರೀಗಳ ಕಾರ್ಯಗಳನ್ನು ನಿರಂತರವಾಗಿ ನಡೆಯಲಿ. ಹೊಸ ಪೀಠಾಧಿಪತಿಗಳಿಗೆ ಭಕ್ತರು ಸಹಕಾರ ನೀಡುವಂತೆ ಕೋರಿದ ಅವರು, ಪೀಠಾರೋಹಣಕ್ಕಿಂತ ಮುಂಚೆ ಇದೇ ದಿ. 9 ರಿಂದ 20 ರವರೆಗೆ 11 ದಿನಗಳವರೆಗೆ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಲು ಶೇಗುಣಸಿಯ ಡಾ. ಪ್ರಭು ಮಹಾಂತ್ ಮಹಾಸ್ವಾಮಿಗಳಿಂದ ಶೂನ್ಯ ಸಂಪಾದನೆ ಪ್ರವಚನ ಜರುಗಲಿದೆ. ಸಕಲ ಸದ್ಭಕ್ತರು ತನು, ಮನ, ಧನ ಸೇವೆ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಡಾ. ಸಿದ್ಧರಾಮ ಮಹಾಸ್ವಾಮಿಗಳು ಭಕ್ತರಲ್ಲಿ ಕೋರಿದರು.
ಗೋಕಾಕದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಅರಭಾವಿ ಮಠಕ್ಕೆ ಗುರುಬಸವಲಿಂಗ ಮಹಾಸ್ವಾಮಿಗಳು ಸಮರ್ಥ ಉತ್ತರಾಧಿಕಾರಿಯಾಗಿದ್ದಾರೆ. ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಶ್ರೀಮಠದ ಪರಂಪರೆಯನ್ನು ಎತ್ತಿ ಹಿಡಿಯುವಂತೆ ಸಲಹೆ ಮಾಡಿದ ಅವರು, ತಾಲೂಕಿನ ಹಲವು ಮಠಗಳಿಗೆ ಭೂ ದಾನ ಮಾಡಿರುವ ಶಿಂಧಿಕುರಬೇಟ ಸರ್ಕಾರ ಸಿದ್ರಾಮ ದೇಸಾಯಿ ಅವರ ಕಾರ್ಯಗಳನ್ನು ಶ್ಲಾಘಿಸಿದರು.
ಮುಖಂಡ ಅಶೋಕ ಪೂಜೇರಿ ಮಾತನಾಡಿ, ಅರಭಾವಿ ಮಠವು ತನ್ನದೇಯಾದ ಹಿನ್ನೆಲೆ, ಇತಿಹಾಸವನ್ನು ಹೊಂದಿದೆ. ಯಾವುದೇ ಅಹಂ ಇಲ್ಲದೇ ಸದ್ಭಕ್ತರೊಂದಿಗೆ ಸರಳವಾಗಿ ಬೆರೆಯುವ ಸ್ವಭಾವವನ್ನು ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಬೆಳೆಸಿಕೊಂಡಿದ್ದರು. ಅವರ ಅಕಾಲಿಕ ನಿಧನದಿಂದ ಅಸಂಖ್ಯಾತ ಭಕ್ತರು ಇನ್ನೂ ಶೋಕ ಸಾಗರದಲ್ಲಿ ಮುಳುಗಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಪ್ರಾದೇಶಿಕ ಆಯುಕ್ತ ಡಾ. ಎಂ.ಜಿ. ಹಿರೇಮಠ ಮಾತನಾಡಿ, ಅರಭಾವಿ ದುರದುಂಡೀಶ್ವರ ಮಠದ ಭಕ್ತರಾಗಿರುವ ನಮ್ಮ ಕುಟುಂಬವು ಲಿಂಗೈಕ್ಯ ಸ್ವಾಮೀಜಿಗಳೊಂದಿಗೆ ಅನೇಕ ವರ್ಷಗಳಿಂದ ಉತ್ತಮ ಒಡನಾಟವಿತ್ತು. ಸರಳತೆಗೆ ಮತ್ತೊಂದು ಹೆಸರೇ ಸಿದ್ಧಲಿಂಗ ಮಹಾಸ್ವಾಮಿಗಳು. ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯು ನಮ್ಮಂತಹ ಭಕ್ತರ ಮೇಲಿದೆ ಎಂದು ಹೇಳಿದರು.
ಶ್ರೀಮಠದ ಉತ್ತರಾಧಿಕಾರಿ ಗುರುಬಸವಲಿಂಗ ಮಹಾಸ್ವಾಮಿಗಳು, ನಿಡಸೋಶಿಯ ನಿಜಲಿಂಗೇಶ್ವರ ಮಹಾಸ್ವಾಮಿಗಳು, ಸೇಗುಣಸಿಯ ಡಾ. ಪ್ರಭು ಮಹಾಂತ್ ಮಹಾಸ್ವಾಮಿಗಳು, ಘಟಪ್ರಭಾದ ವಿರುಪಾಕ್ಷ ಮಹಾಸ್ವಾಮಿಗಳು, ಘಟಪ್ರಭಾ ಜೆಜಿಕೋ ಅಧ್ಯಕ್ಷ ಅಪ್ಪಯ್ಯಪ್ಪ ಬಡಕುಂದ್ರಿ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ರಾಮಣ್ಣಾ ಹುಕ್ಕೇರಿ, ಹುಬ್ಬಳ್ಳಿಯ ಚೊನ್ನದ, ಗಾಡವಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವೇದಮೂರ್ತಿ ಶಿವಯ್ಯಾ ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀಗಳು, ಶಾಸಕರು ಬರುವ ದಿ. 20 ರಂದು ನಡೆಯುವ ಪೀಠಾರೋಹಣ ಕಾರ್ಯಕ್ರಮದ ನಿಮಿತ್ಯ ದೇಣಿಗೆ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

*ಕೋಟ್:*
*ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಮಠದ ಸದ್ಭಕ್ತರು ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಪರಮ ಭಕ್ತರು. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಾಲಚಂದ್ರ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಶಾಸಕರಾಗಿ ಅಪಾರ ಜನ ಮನ್ನಣೆ ಗಳಿಸಿದ್ದಾರೆ. ಜೊತೆಗೆ ಅರಭಾವಿ ಶ್ರೀಮಠಕ್ಕೆ ತನು, ಮನ, ಧನ ಸೇವೆ ಸಲ್ಲಿಸುವ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ತಾಯಿ-ತಂದೆಯವರ ಸ್ಮರಣಾರ್ಥ ಅರಭಾವಿ ಮಠದಲ್ಲಿ ಸುಸಜ್ಜಿತವಾದ ಸಭಾ ಭವನವನ್ನು ನಿರ್ಮಿಸುವ ಮೂಲಕ ನಮ್ಮೆಲ್ಲ ಧಾರ್ಮಿಕ ಕಾರ್ಯಗಳಿಗೆ ಆಸರೆಯಾಗಿ ನಿಂತಿದ್ದಾರೆ.*

*ಡಾ. ಸಿದ್ಧರಾಮ ಮಹಾಸ್ವಾಮಿಗಳು,* ಗದಗ-ಡಂಬಳ-ಎಡೆಯೂರು ಸಿದ್ಧಲಿಂಗ ಮಠದ ಜಗದ್ಗುರುಗಳು.

 


Spread the love

About Ad9 Haberleri

Check Also

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

Spread the love ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ …

Leave a Reply

Your email address will not be published. Required fields are marked *