ಮೂಡಲಗಿ – ವಡೇರಹಟ್ಟಿಯಲ್ಲಿ ನಿರ್ಮಾಣಗೊಂಡಿರುವ ಸ್ಮಾರ್ಟ ಕ್ಲಾಸ್ ಅಂಗನವಾಡಿಯು ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. ಇದು ಅಂಗನವಾಡಿ ಕೇಂದ್ರನಾ? ಇಲ್ಲ ಬೇರೇ ಯಾವ ಕಾನ್ವೆಂಟ್ ಶಾಲೆಗೆ ಬಂದಿದ್ವಾ? ಎಂಬ ಪ್ರಶ್ನೆಯು ಸಾರ್ವಜನಿಕರನ್ನು ಸಹಜವಾಗಿ ಕಾಡುತ್ತಿದೆ. ಅಷ್ಟೊಂದು ಖಾಸಗಿ ಶಾಲೆಯ ಕಾನ್ವೆಂಟ್ ಮಾದರಿಯಲ್ಲಿ ಸರ್ಕಾರಿ ಅಂಗನವಾಡಿಯು ನಿರ್ಮಾಣವಾಗಿರುವುದು ಮನಸ್ಸಿಗೆ ಖುಷಿ ತರಿಸಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು
ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಅರಭಾವಿ ಶಿಶು ಅಭಿವೃದ್ಧಿ ಯೋಜನೆಯಡಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಸ್ಮಾರ್ಟ ಕ್ಲಾಸ್ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಅರಭಾವಿ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಹೊಸ ಸ್ಮಾರ್ಟ ಕ್ಲಾಸ್ ಕಟ್ಟಡಗಳ ಪರಿಕಲ್ಪನೆಗಳು ಇತರರಿಗೆ ಮಾದರಿಯಾಗಿವೆ. ಅದಕ್ಕಾಗಿ ಸಿಡಿಪಿಓ ವಾಯ್.ಕೆ.ಗದಾಡಿಯವರನ್ನು ಅಭಿನಂದಿಸುತ್ತೇನೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಉದಗಟ್ಟಿ, ಖಂಡ್ರಟ್ಟಿ, ಹಳ್ಳೂರ, ಸುಣಧೋಳಿ, ತುಕ್ಕಾನಟ್ಟಿ, ಹೊಸಟ್ಟಿ, ದಂಡಾಪೂರ ಗ್ರಾಮಗಳಿಗೆ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗಾಗಿ ತಲಾ 20 ಲಕ್ಷ ರೂಪಾಯಿಗಳಂತೆ ಒಟ್ಟು 1.40 ಕೋಟಿ ರೂಪಾಯಿ ಅನುದಾನ ಬಂದಿದೆ. ಶೀಘ್ರದಲ್ಲಿಯೇ ಇವುಗಳ ಕಟ್ಟಡ ಕಾಮಗಾರಿಗಳು ನಡೆಯಲಿವೆ. ತಲಾ 16 ಲಕ್ಷ ರೂ ವೆಚ್ಚದ ಅವರಾದಿ, ನಲ್ಲಾನಟ್ಟಿ, ತಲಾ 20 ಲಕ್ಷ ರೂ ವೆಚ್ಚದ ಮೂಡಲಗಿ, ಗುರ್ಲಾಪೂರದಲ್ಲಿ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳಿಗೆ ಒಟ್ಟು 72 ಲಕ್ಷ ರೂಪಾಯಿ ತಗುಲಿದೆ. ರಾಜಾಪೂರ ಗ್ರಾಮದಲ್ಲಿ 16 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ವ್ಯವಸ್ಥಿತವಾಗಿ ಸಂಘಟನೆಯಾದರೆ ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದನ್ನು ಈ ಗ್ರಾಮಸ್ಥರು ನಿರೂಪಿಸಿದ್ದಾರೆ. ಜನರಿಗೆ ತಕ್ಕಂತೆ ಕೆಲಸ ಮಾಡಿಕೊಡಬೇಕು. ಪ್ರತಿಯೊಂದಕ್ಕೂ ನನ್ನನ್ನೇ ಅವಲಂಬಿಸಬಾರದು. ಸ್ಥಳೀಯವಾಗಿರುವ ಸಮಸ್ಯೆಗಳನ್ನು ನೀವೇ ಪರಿಹರಿಸಬೇಕು. ಅಂದಾಗ ಮಾತ್ರ ಬದಲಾವಣೆಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ- ಗ್ರಾಮ ಪಂಚಾಯತಿಯಿಂದ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಅಕ್ಕವ್ವ ಮಳಿವಡೇರ, ಮೂಡಲಗಿ ತಹಶೀಲ್ದಾರ ಮಹಾದೇವ ಸನ್ಮುರಿ, ತಾ.ಪಂ. ಇಓ ಫಕೀರಪ್ಪ ಚಿನ್ನನವರ, ಅರಭಾವಿ ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ, ಪ್ರಭಾ ಶುಗರ್ ನಿರ್ದೇಶಕಿ ಯಲ್ಲವ್ವ ಸಾರಾಪೂರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಗ್ರಾ.ಪಂ. ಉಪಾಧ್ಯಕ್ಷೆ ಲಕ್ಕವ್ವ ಸಾರಾಪೂರ, ಎಪಿಎಂಸಿ ಮಾಜಿ ಅಧ್ಯಕ್ಷ ಎ.ಟಿ. ಗಿರಡ್ಡಿ, ಮುರಳಿ ವಜ್ರಮಟ್ಟಿ, ಸ್ಥಳೀಯ ಪ್ರಮುಖರಾದ ಬನಪ್ಪ ವಡೇರ, ಚಂದ್ರು ಮೋಟೆಪ್ಪಗೋಳ, ವಿಠ್ಠಲ ಗಿಡೋಜಿ, ಅಡಿವೆಪ್ಪ ಹಾದಿಮನಿ, ರುದ್ರಗೌಡ ಪಾಟೀಲ, ಮಾರುತಿ ಪೂಜೇರಿ, ಗೋಪಾಲ ಬೀರನಗಡ್ಡಿ, ಮಾರುತಿ ನಂದಿ, ಸಂಗಪ್ಪ ಪೂಜೇರಿ, ಮಹಾಂತೇಶ ಬಡಿಗೇರ, ರಮೇಶ ಈರಗಾರ, ಶಿದ್ಲಿಂಗ ಗಿಡೋಜಿ, ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ ಶಿವಾನಂದ ಗುಡಸಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.