ಝಲ್
ಕವಿತೆಗೂ ರಾಗದ ಕೊರತೆ ನೀನಿಲ್ಲದೇ
ನಗುವಿಗೂ ಭಾವದ ಕೊರತೆ ನೀನಿಲ್ಲದೇ
ಸವಿ ಸಂಜೆಯಲಿ ಸೌಂದರ್ಯದ ಸುಳಿವಿಲ್ಲ
ಮನಸಿಗೂ ಸೌಖ್ಯದ ಕೊರತೆ ನೀನಿಲ್ಲದೇ
ವೇದನೆಯ ತಂಗುದಾಣವಾಗಿದೆ ಹೃದಯ
ನಲಿವಿಗೂ ತಾಣದ ಕೊರತೆ ನೀನಿಲ್ಲದೇ
ಸಹಿ ಇರದ ಪತ್ರಗಳಾಗಿವೆ ಪ್ರತಿ ಹಗಲಿರುಳು
ಕನಸಿಗೂ ಬಣ್ಣದ ಕೊರತೆ ನೀನಿಲ್ಲದೇ
ಕಣ್ಣೆವೆಗಳು ಮುನಿಸಾಗಿವೆ ನಿಶೆಯೊಡನೆ
ಪ್ರಣತಿಗೂ ತೈಲದ ಕೊರತೆ ನೀನಿಲ್ಲದೇ
ತಿರುವುಗಳ ಹಾಜರಿಯ ಭಯದಲ್ಲಿದೆ ಬಾಳು
ಹೆಜ್ಜೆಗೂ ಧೈರ್ಯದ ಕೊರತೆ ನೀನಿಲ್ಲದೇ
ಒಲವ ಹೊರತು ತಪಸ್ಯಾಳಿಗೆ ಸಂಭ್ರಮವೆಲ್ಲಿ
ಬದುಕಿಗೂ ಅರ್ಥದ ಕೊರತೆ ನೀನಿಲ್ಲದೇ
ವತ್ಸಲಾ ಶ್ರೀಶ ಕೊಡಗು