🌹🌹 ಉಸಿರೇ…… 🌹🌹
ಬೆಳದಿಂಗಳೇ…..
ಒಮ್ಮೆ ಕುಳಿತು ಮಾತಾಗುವ
ನಕ್ಷತ್ರಗಳ ಉಯ್ಯಾಲೆ
ಮಾಡಿ ಕಾಯುವೆಯಾ
ಕದ ತಟ್ಟಿ ನಿಂತ
ಸಾವನ್ನು ನಿಲ್ಲಿಸಿ ಬರುವೆ
ಹುಣ್ಣಿಮೆ ಕಥೆಗಳ
ಸಂಪ್ರೀತಿಯ ಸಾರ
ಉಣ ಬಡಿಸು
ಮಳೆಯೇ….
ಜಿಟಿ ಜಿಟಿಯ
ಹಾಡೊಂದ ಹಾಡಿ ಕೇಳಿಸು
ಹೃದಯಕ್ಕೆ ಗೀರಿದ ಗಾಯವಾಗಿದೆ
ಅದರ ಮೇಲೆ
ಹನಿ ಹನಿಯ
ತುಂತುರ ಸ್ಪರ್ಶವಿರಲಿ
ಎದೆಯಾಳಕ್ಕೆ ನೋವ ಇಳಿಸುತ್ತಾ
ಮಾಗದ ಗಾಯ ಹಾಗೇ
ಉಳಿಸಿ ಬಿಡು
ಉಸಿರೇ….
ಬೆಳದಿಂಗಳಲಿ ನಕ್ಷತ್ರಗಳ
ಉಯ್ಯಾಲೆ ಮೇಲೆ ಜೀಕಿ
ಮಳೆಯಲಿ
ಘಾಸಿಗೊಂಡ ದೇಹವಿದು
ಹೊಸಿಲಾಚೆ ನಿಂತ ಸಾವು
ದಾರಿ ಕಾಯುತಿದೆ
ಎಣಿಕೆ ತಪ್ಪಿದ
ಎದೆ ಬಡಿತ
ಆರೋಹಣ ಅವರೋಹಣವಾಗಿ
ನಿಂತೇ ಬಿಡುತ್ತಿದೆ
ಇಲ್ಲಿ ಕಳೆದ ನಗು
ಇನ್ಯಾರದೋ ತುಟಿಯoಚಲಿ
ನಗುವಾಗಿ
ಗಲ್ಲದ ಮೇಲೆ
ನವಿಲು ನರ್ತನವಾಗಿದೆ
🌹🌹🌹🌹🌹
ಡಾ|| ಸಿ. ನಂದಿನಿ