ಧರೆಯೊಳಗೆ ಮಾನವನಾಗಿ ಜನಿಸಿದ
ಕೂಲಿಯಾಳಾಗಿ ನೆರೆಮನೆಯಲ್ಲಿ ದುಡಿದ
ತಾಯಿ ಬಸುರಿಗೂ ಲೆಕ್ಕಹಾಕಿದ
ಪವಾಡಗಳ ಸುರಿಮಳೆಯ ಸುರಿಸಿದ!
ಕೊಬ್ಬರಿ ಸುಟ್ಟ ಬೆಳಕಿನಲಿ ಮುನ್ನಡೆದ
ಫಣಿಯಪ್ಪನ ಮನೆಯಲಿ ಆಶ್ರಯಪಡೆದ
ನಾಯ್ಕನಹಟ್ಟಿಯ ದೊರೆಯಾಗಿಮೆರೆದ
ಬಿಳಿನೀರ ಚಿಲುಮೆಯ ಹರಿಸಿದ!
ಸದೃಶ್ಯನಾಗಿ ಜಾತಿಭೇದತೊಲಗಿಸಿದ
ಮಾರಮ್ಮನ ಗುಡಿಯಲಿ ಸ್ಥಾನವ ಬೇಡಿದ
ಜೋಳಿಗೆ ಬೆತ್ತದಿ ಗುಡಿಯತುಂಬಿಸಿದ
ಮಾರಮ್ಮಗೆ ತಡೆಯೊಡ್ಡಿ ತಾನೇ ನೆಲೆಸಿದ!
ಐದುಗಾಲಿರಥ ಹರಕೆಕೂಸನು ದಾಟಿತು
ನೆರೆದ ಜನದಲಿ ಮಗುವು ನಕ್ಕಿತು
ಸತ್ತೆಮ್ಮಯ ಹಾಲನು ಕರೆದುಂಡ ತಿಪ್ಪೇಶ
ಆಂಜನೇಯಗೆ ಲಿಂಗಧರಿಸಿದ ರುದ್ರೇಶ!
ಮಾಡಿದಷ್ಟು ನೀಡೆಂದು ಹರಸಿದ
ರಾಣಿ ನಾಗತಿಗೆ ಮಕ್ಕಳಭಾಗ್ಯನೀಡಿದ
ಜನರಕಷ್ಟಗಳ ಬಗೆಹರಿಸಿದ
ಬೇಡಿದ ವರಗಳ ಕರುಣಿಸಿದ!
ಪಾಲ್ಗುಣ ಪೌರ್ಣಮಿಗೆ ಸಾಗಿತು ರಥವು
ಜನಗಜಂಗುಳಿಯು ಭಕ್ತರ ಸಂಭ್ರಮವು
ತಿಪ್ಪೇಶ ಸರಿಯೇ ನಿನಗಾರು ಸರಿಯೇ
ಸರಿಸರಿಎಂದವರಹಲ್ಲುಮುರಿಯೇ!
ಜೈ ಜೈ ಶ್ರೀಗುರು ತಿಪ್ಪೇಶ
ನಾಯಕನಹಟ್ಟಿಯ ಶ್ರೀರುದ್ರೇಶ
ಹರಹರ ಶ್ರೀವರಗುರು ಮಾಂತೇಶ
ಧರೆಯಲಿ ನೆಲೆಸು ಶ್ರೀಗುರುತಿಪ್ಪೇಶ!!
ಧರಣೀಪ್ರಿಯೆ
ದಾವಣಗೆರೆ