ಭರವಸೆ
Ad9 Haberleri
January 24, 2023
ಕವನ
189 Views
ಕತ್ತಲಾಚೆ ಬದುಕಿದೆ
ಚಿತ್ತವಿಟ್ಟು ನಡೆ
ಒಪ್ಪು ಓರಣದ ಬದುಕಿದೆ.
ಸೋಲು ಹತಾಶೆಗಳಾಚೆ
ಬೆಳ್ಳಿ ರೇಖೆ ಮೂಡೀತು
ತಳ್ಳಿ ಹೋಗದರಿ ಅವಕಾಶವ.
ಎಡೆಬಿಡದೆ ಪ್ರಯತ್ನಿಸು
ಗರಬಡಿದ ಮನವ ಸಂತೈಸಿ
ಧೃತಿ ಗೆಡದೆ ಅಡಿಯಿಡುತ.
ಸ್ಮೃತಿ ಪಟಲದಿ ಕಲೆಹಾಕು
ವ್ಯಾಕುಲತೆಯ ಬದಿಗಿರಿಸಿ
ವಿಚಾರವಂತಿಕೆಯಲಿ ಗೋಚರ.
ಬಯಕೆ ಆಡಂಬರವು ಕ್ಷಣಿಕ
ಇರುವ ದಿನದಲಿ ಪ್ರಾಮಾಣಿಕ
ಏರುವ ಮುಗಿಲೆತ್ತರದ ತೆರದಿ.
ದೂಷಿಸುವವರ ಕಡೆಗಣಿಸಿ
ತಿರಸ್ಕರಿಸಿದವರ ನಿಬ್ಬೆರಗಾಗುವಂತೆ
ಛಲಬಿಡದೆ ಸಾಗಿ ಬಿಡು.
ಬಲಾಬಲದಿ ಲೆಕ್ಕಾಚಾರ
ಒಮ್ಮೊಮ್ಮೆ ತಿರುಗಣಿ ಆಟ
ಸಮಯೋಚಿತದಿ ಎಲ್ಲವೂ ನಡೆವುದು.
ಕಳೆದುಕೊಳ್ಳದಿರಿ ಅತ್ಯವಸರದಿ
ಬೆಳೆವ ಹಂಬಲ ಹೊತ್ತು
ಮನದ ಕೊಳೆಯ ಕಿತ್ತೆಸೆದು.
ಕಾನನದದಿ ಮೂಡೀತು ಬೆಳಕು
ಆನುತಾನುಗಳ ಸರಿಸಿದೆಡೆ
ಆತ್ಮಾನು ಸಂಧಾನದಿ ಜೀವಕಳೆ.
ಪೈಪೋಟಿಯ ಜಗವಿದು
ಕೈಕೊಡುವವರು ಹಲವರು
ಕೊಸರಿ ನಡೆ ಧೂಷಿಸುವವರ ದೂಡಿ.
ದಿಗಂತದಿ ಬೆಳ್ಳಿ ರೇಖೆ
ಆಗುಂತಕನಿಗೂ ತಕ್ಕ ಪಾಠ
ಬಾಳ ಹೂಬನಕೆ ಆಲಿಂಗನ.
ಮುದುಡಿದ ಹೂ ಅರಳಿ
ಸಾಧನೆಯ ಕಂಪ ಸೂಸಿ
ಭರವಸೆಯ ಪಯಣ ಸುಖಾಂತ್ಯ.
*ರೇಷ್ಮಾ ಕಂದಕೂರ*
*ಶಿಕ್ಷಕಿ*
*ಸಿಂಧನೂರು*